ತನಗೆ ಮಕ್ಕಳಾಗಲಿಲ್ಲವೆಂದು ಬಾವನ ಮಗುವನ್ನು ಮಹಡಿಯಿಂದ ಕೆಳಗೆಸೆದ ಚಿಕ್ಕಮ್ಮ!

women
Published on

ಹೈದರಾಬಾದ್​: ಕೆಲವು ವಿಚಾರಗಳು ಮನುಷ್ಯನ ಮನಸ್ಥಿತಿಯನ್ನು ಎಷ್ಟರ ಮಟ್ಟಿಗೆ ಹಾಳು ಮಾಡುತ್ತದೆ ಎನ್ನುವುದಕ್ಕೆ ಈ ಘಟನೆ ಒಂದು ಉದಾಹರಣೆ. ಮಕ್ಕಳಾಗಿಲ್ಲ ಎಂದು ಕೊರಗುವ ಹೆಣ್ಣು ಮಕ್ಕಳ ಮನಸ್ಥಿತಿ ಎಂಥಹ ನೀಚ ಬುದ್ಧಿಗೆ ಇಳಿಯಬಹುದು ಎನ್ನುವುದಕ್ಕೆ ಇದೇ ಸಾಕ್ಷಿ.

ಅದು ತೆಲಂಗಾಣದ ಹೈದರಾಬಾದ್​ನಲ್ಲಿದ್ದ ಕುಟುಂಬ. ಮೊಹಮ್ಮದ್ ಈತಶಾಮುದ್ದೀನ್ (32) ಮತ್ತು ಶುಜಾದ್ದೀನ್(27) ಹೆಸರಿನ ಅಣ್ಣ ತಮ್ಮ ಇಬ್ಬರೂ ಒಂದೇ ಕಟ್ಟಡದಲ್ಲಿ ಜೀವನ ನಡೆಸುತ್ತಿದ್ದರು. ಈತಶಾಮುದ್ದೀನ್​ಗೆ ಮದುವೆಯಾಗಿ ಮೂರು ವರ್ಷದ ಮಗುವಿತ್ತು. ಶುಜಾದ್ದೀನ್​ಗೆ ಒಂದು ವರ್ಷದ ಹಿಂದೆ ಐಶಾ(22) ಹೆಸರಿನ ಯುವತಿಯೊಂದಿಗೆ ಮದುವೆಯಾಗಿತ್ತು.

ಮದುವೆಯಾಗಿ ಒಂದು ವರ್ಷವಾದರೂ ಐಶಾಗೆ ಗರ್ಭ ನಿಂತಿರಲಿಲ್ಲ. ಅದರಿಂದ ಆಕೆ ಸಾಕಷ್ಟು ನೊಂದಿದ್ದಳಂತೆ. ಶುಜಾದ್ದೀನ್​ಗೆ ಅಣ್ಣನ ಮಗಳೆಂದರೆ ಎಲ್ಲಿಲ್ಲದ ಪ್ರೀತಿ. ಪ್ರತಿನಿತ್ಯ ಆಕೆಯೊಂದಿಗೆ ಆಟವಾಡುತ್ತಿರುತ್ತಿದ್ದನಂತೆ. ಪ್ರೀತಿಯಿಂದ ಮುದ್ದಾಡುತ್ತಿದ್ದನಂತೆ. ಆದರೆ ಅದನ್ನು ನೋಡಿದಾಗಲೆಲ್ಲ ಐಶಾ ಇನ್ನಷ್ಟು ಕುಗ್ಗಲಾರಂಭಿಸಿದ್ದಾಳೆ. ತಾನಿನ್ನೂ ತಾಯಿ ಆಗಿಲ್ಲ ಎನ್ನುವ ನೋವು ಹೆಚ್ಚಾಗಲಾರಂಭಿಸಿದೆ. ಅದೇ ನೋವಿನಿಂದ ಆಕೆ ಮಾಡಬಾರದ ನಿರ್ಧಾರವೊಂದನ್ನು ಮಾಡಿಬಿಟ್ಟಿದ್ದಾಳೆ.

ಇತ್ತೀಚೆಗೆ ಒಂದು ದಿನ ಅವರ ಬಾವನ ಮಗನನ್ನು ಕರೆದಿದ್ದಾಳೆ. ಅವಳ ಕೈಗಳನ್ನು ಕಟ್ಟಿ, ಎರಡನೇ ಮಹಡಿಯಿಂದ ಕೆಳಗೆ ದೂಡಿದ್ದಾಳೆ. ಕೆಳಗೆ ಬಿದ್ದ ಮಗುವಿಗೆ ಗಂಭೀರ ಗಾಯವಾಗಿದ್ದು, ಅದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net