

ವಿಜಯವಾಣಿ ಸುದ್ದಿಜಾಲ ಬೈಂದೂರು
ಎಲ್ಲ ಮಹಿಳೆಯರಿಗೂ ತಮ್ಮ ಹಕ್ಕುಗಳ ಕುರಿತು ಅರಿವು ಅಗತ್ಯವಿದ್ದು, ಹೆಣ್ಣುಮಕ್ಕಳಲ್ಲಿ ಆತ್ಮವಿಶ್ವಾಸವೂ ಮೂಡುತ್ತದೆ. ಆ ಮೂಲಕ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯಗಳ ತಡೆ ಸಾಧ್ಯ ಎಂದು ದ್ರಾವಿಡ ಬ್ರಾಹ್ಮಣ ಪರಿಷತ್ ತಾಲೂಕು ಮಹಿಳಾ ವೇದಿಕೆ ಅಧ್ಯಕ್ಷೆ ಸಂಧ್ಯಾ ಉಡುಪ ಹೇಳಿದರು.
ನಾಗೂರು ಶ್ರೀಕೃಷ್ಣಲಲಿತ ಕಲಾಮಂದಿರದಲ್ಲಿ ಭಾನುವಾರ ಕುಂದಾಪುರ ತಾಲೂಕು ವಿಪ್ರ ಮಹಿಳಾ ಸಮಾವೇಶ ಸದ್ಭಾವನಾ ಲಹರಿ-2024ರ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕುಟುಂಬದ ಕೇಂದ್ರಬಿಂದು ಮಹಿಳೆಗೆ ಸೂಕ್ತ ಸ್ಥಾನ ನೀಡಿ ಪೂಜ್ಯಭಾವನೆಯಿಂದ ಕಾಣುವ ಸಂಸ್ಕೃತಿ ನಮ್ಮದು. ಬಲಿಷ್ಠ ಮಹಿಳಾ ಸಮಾಜ ನಿರ್ಮಿಸಿದಲ್ಲಿ ಸ್ತ್ರೀಕುಲದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದರು.
ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಉದ್ಯಮಿ ಜಯಶ್ರೀ ರಘುರಾಮ ರಾವ್ ಬಹುಮಾನ ವಿತರಿಸಿದರು. ತಾಲೂಕಿನ ಹದಿನಾರು ವಲಯದಿಂದ ತಲಾ ಒರ್ವ ಸಾಧಕ ವಿಪ್ರ ಮಹಿಳೆಯನ್ನು ಸನ್ಮಾನಿಸಲಾಯಿತು. ಒರ್ವ ವಿಪ್ರ ಮಹಿಳೆಗೆ ಬೆಳ್ಳಿ ನಾಣ್ಯವನ್ನು ಬಹುಮಾನ ನೀಡಲಾಯಿತು. ತಾಲೂಕು ಬ್ರಾಹ್ಮಣ ಪರಿಷತ್ ಅಧ್ಯಕ್ಷ ಶುಭಚಂದ್ರ ಹತ್ವಾರ್, ವಾಣಿ ಹತ್ವಾರ್ ಕುಂದಾಪುರ, ನಿವೃತ್ತ ಮುಖ್ಯಶಿಕ್ಷಕಿ ಅನಸೂಯಾ ಕೆ, ಉಪ್ಪುಂದ ವಲಯಾಧ್ಯಕ್ಷ ಯು. ಸಂದೇಶ ಭಟ್, ವಿಪ್ರ ಯುವ ವೇದಿಕೆ ಅಧ್ಯಕ್ಷ ಅವನೀಶ್ ಹೊಳ್ಳ, ತಾಲೂಕು ಖಜಾಂಚಿ ರಘುರಾಮ ರಾವ್ ಇದ್ದರು. ಶಶಿಕಲಾ ಉಡುಪ ಸ್ವಾಗತಿಸಿದರು. ಪ್ರತಿಮಾ ಹೆಬ್ಬಾರ್ ವಂದಿಸಿದರು. ವತ್ಸಲಾ ರಾವ್ ನಿರೂಪಿಸಿದರು.
ಕೆಎಂಸಿ ಮಣಿಪಾಲ ವೈದ್ಯಕೀಯ ವಿಭಾಗದ ಸಹಯೋಗದಲ್ಲಿ ಗರ್ಭಕಂಠ ಮತ್ತು ಸ್ತನ ಕ್ಯಾನ್ಸರ್ ತಪಾಸಣಾ ಶಿಬಿರ ನಡೆಯಿತು. ಬಳಿಕ ಶೋಭಾ ಎಸ್. ಕುಂಭಾಸಿ ನೇತೃತ್ವದಲ್ಲಿ ಮಹಿಳೆಯರ ಚರ್ಚಾಗೋಷ್ಠಿ ಹರಟೆ ಜರುಗಿತು.