ಮಹಿಳೆಯರಿಗೆ ಉದ್ಯಮ ನಿರ್ವಹಣೆಯ ಕೌಶಲ ಅಗತ್ಯ

kon-1
Published on

ವಿಜಯವಾಣಿ ಸುದ್ದಿಜಾಲ ಕೊಕ್ಕರ್ಣೆ

ಉದ್ಯಮಗಳ ಸ್ಥಾಪನೆ ಹಾಗೂ ನಿರ್ವಹಣೆಗೆ ಮಹಿಳೆಯರಿಗೆ ವಿಪುಲವಾದ ಅವಕಾಶಗಳಿದ್ದು ಸಾಮೂಹಿಕ ನೆಲೆಯಲ್ಲಿ ಹಾಗೂ ಸಂಘಟಿತರಾಗಿ ಕಾರ್ಯನಿರ್ವಹಿಸುವುದು ಅಗತ್ಯ ಎಂದು ಸಂಜೀವಿನಿ ಯೋಜನೆ ತಾಲೂಕು ಸಂಪನ್ಮೂಲ ವ್ಯಕ್ತಿ ಸಹನಾ ಹೆಬ್ಬಾರ್ ಚೇರ್ಕಾಡಿ ಅನಿಸಿಕೆ ವ್ಯಕ್ತಪಡಿಸಿದರು.

ಕಾಡೂರು ಗ್ರಾಮ ಪಂಚಾಯಿತಿಯಲ್ಲಿ ಜರುಗಿದ ಮಹಿಳಾ ದಿನಾಚರಣೆ ಮತ್ತು ಮಹಿಳಾ ಗ್ರಾಮಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಸ್ಥಳೀಯವಾಗಿ ಉದ್ಯಮ ಸ್ಥಾಪನೆ ಮಾಡಲು ಹಿಂದೆಂದಿಗಿಂತಲೂ ಉತ್ತಮ ಅವಕಾಶಗಳಿದ್ದು ಸಂಘಟನೆ ಹಾಗೂ ಶಿಸ್ತು ಅಗತ್ಯ ಎಂದು ತಿಳಿಸಿದರು. ಕ್ಯಾಟರಿಂಗ್, ಪುಷ್ಪೋದ್ಯಮ, ಸಾಂಪ್ರದಾಯಿಕ ಆಹಾರ ತಯಾರಿ ಉದ್ಯಮ ಸೇರಿದಂತೆ ಮಹಿಳೆಯರು ಸಂಘಟಿತರಾಗಿ ಉದ್ಯಮಪತಿಗಳಾಗಲು ಆರ್ಥಿಕ ಸಹಾಯ ಸೇರಿದಂತೆ ತರಬೇತಿ ಮೂಲಕ ಕೌಶಲ ಅಭಿವೃದ್ಧಿಗೂ ಒತ್ತು ನೀಡಲಾಗಿದೆ ಎಂದು ತಿಳಿಸಿದರು.

ಕಾಡೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಪ್ರಭಾವತಿ ಮಾತನಾಡಿ, ಗ್ರಾಮೀಣ ಪ್ರದೇಶದ ಮಹಿಳೆಯರು ಒಕ್ಕೂಟದ ಮೂಲಕ ಪಡೆದ ಸಾಲ ಸೌಲಭ್ಯವನ್ನು ವೈಯಕ್ತಿಕ ಉದ್ದೇಶಕ್ಕೆ ಸೀಮಿತವಾಗಿ ಬಳಸಿ ಬಡ್ಡಿಪಾವತಿಸುವ ಪ್ರವೃತ್ತಿಯನ್ನು ಕೈ ಬಿಟ್ಟು ಉದ್ಯಮ ಪ್ರಾರಂಭಿಸುವ ಹಾಗೂ ಉದ್ಯೋಗ ನೀಡುವ ಕಾರ್ಯದ ಮೂಲಕ ಮುನ್ನೆಲೆಗೆ ಬರಬೇಕು ಎಂದು ತಿಳಿಸಿದರು.

ಪಂಚಾಯಿತಿ ಅಧ್ಯಕ್ಷ ಜಲಂಧರ್ ಶೆಟ್ಟಿ ಮಾತನಾಡಿ, ಸಂಘಗಳನ್ನು ಉತ್ಪಾದಕವಾಗಿ ಮಾಡುವುದರೊಂದಿಗೆ ಆರ್ಥಿಕ ಸ್ವಾವಲಂಬನೆಗೆ ಹೆಚ್ಚಿನ ಆದ್ಯತೆ ಸಿಗುತ್ತಿದ್ದು ಮಾಹಿತಿ ಹಾಗೂ ತರಬೇತಿ ಪಡೆದು ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು.

ಆರೋಗ್ಯ, ಬ್ಯಾಂಕಿಂಗ್ ಸಾಕ್ಷರತೆ, ಸೈಬರ್ ಅಪರಾಧಗಳು, ಜಲಜೀವನ್ ಮಿಷನ್ ಯೋಜನೆ ಕುರಿತಂತೆ ಇಲಾಖೆಗಳು ಹಾಗೂ ತಜ್ಞರಿಂದ ಮಾಹಿತಿ ನೀಡಲಾಯಿತು.

ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಹಿಳೆಯರಿಗೆ ಬಹುಮಾನ ವಿತರಿಸಲಾಯಿತು. ಗ್ರಾಮ ಪಂಚಾಯಿತಿ ಸದಸ್ಯರಾದ ಪಾಂಡುರಂಗ ಶೆಟ್ಟಿ, ವೀಣಾ, ಅಮಿತಾ, ವಿಜಯಾ ಮರಕಾಲ, ಗುಲಾಬಿ, ಗಿರಿಜಾ, ದುರ್ಗಾ ಒಕ್ಕೂಟ ಅಧ್ಯಕ್ಷೆ ಜ್ಯೋತಿ ಶೆಟ್ಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೀನಾಕ್ಷಿ, ಆರೋಗ್ಯ ಇಲಾಖೆಯ ಮಂಜುಳಾ, ಎಂಬಿಕೆ ಸುಜಾತ ಸೇರಿದಂತೆ ಇಲಾಖಾಧಿಕಾರಿಗಳು ಹಾಗೂ ನಾಗರಿಕರು ಉಪಸ್ಥಿತರಿದ್ದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಹೇಶ್ ಕೆ. ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net