ಕೊಪ್ಪಳ: ಅಂತರ್ಜಾತಿ ವಿವಾಹವಾಗಿದ್ದಕ್ಕೆ ಯುವತಿಯೋರ್ವಳಿಗೆ ಗಂಡನ ಮನೆಯವರು ವಿಷವುಣಿಸಿ ಹತ್ಯೆ ಮಾಡಿರುವ ಘಟನೆ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲ್ಲೂಕಿನಲ್ಲಿ ನಡೆದಿದೆ. ಘಟನೆ ಸಂಬಂಧ ಪೊಲೀಸರು 13 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಏಳು ಮಂದಿಯನ್ನು ಬಂಧಿಸಿದ್ದಾರೆ.
ಮೃತರನ್ನು ಗಂಗಾವತಿ ತಾಲ್ಲೂಕಿನ ಆಗೋಲಿ ಗ್ರಾಮದ ಮರಿಯಮ್ಮ (21) ಎಂದು ಗುರುತಿಸಲಾಗಿದ್ದು, ಆಗಸ್ಟ್ 29ರಂದು ಮರಿಯಮ್ಮ ಮೃತಪಟ್ಟಿದ್ದು, ತಡವಾಗಿ ಬೆಳಕಿಗೆ ಬಂದಿದೆ. ವರ್ಷದ ಹಿಂದಷ್ಟೇ ಮರಿಯಮ್ಮ ಕನಕಗಿರಿ ತಾಲ್ಲೂಕಿನ ವಿಠಾಲಪುರ ಗ್ರಾಮದ ಹನುಮಯ್ಯ ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದರು. ಮರಿಯಮ್ಮ, ದಲಿತ ಸಮುದಾಯದವರಾಗಿದ್ದು, ಹನುಮಯ್ಯ ಎಸ್‌ಟಿ ಸಮುದಾಯಕ್ಕೆ ಸೇರಿದವರು ಎಂದು ವರದಿಯಾಗಿದೆ.
ಇದನ್ನೂ ಓದಿ: ಸಾರ್ಥಕ ಬದುಕಿನ ಸುಮಧುರ ಪಯಣ; ಎಲ್ಲವನ್ನೂ ಕರುಣಿಸಿದ ವೃತ್ತಿ , ಪತ್ರಿಕಾ ವಿತರಣೆಯಿಂದಲೇ ಜೀವನ ಕಟ್ಟಿಕೊಂಡವರ ಅನುಭವ
ಹನುಮಯ್ಯ ಎಸ್‌ಟಿ ಸಮುದಾಯಕ್ಕೆ ಸೇರಿದ ಯುವಕ. ಮರಿಯಮ್ಮ ಹಾಗೂ ಹನುಮಯ್ಯ 2023ರ ಎಪ್ರಿಲ್‌ನಲ್ಲಿ ತಮ್ಮ ಕುಟುಂಬದವರನ್ನು ಒಪ್ಪಿಸಿ, ಬಳಿಕ ಗಂಗಾವತಿಯಲ್ಲಿ ಮದುವೆಯಾಗಿದ್ದರು. ಮದುವೆಯಾದ ನಂತರ ಯುವಕನ ಮನೆಯಲ್ಲಿ ಜಾತಿ ಸಂಬಂಧ ಯುವತಿಗೆ ಹಿಂಸೆ ನೀಡುತ್ತಿದ್ದರು. ಅಲ್ಲದೇ, ವರದಕ್ಷಿಣೆ ತರುವಂತೆ ಕೂಡ ಪೀಡಿಸುತ್ತಿದ್ದರು. ಆಕೆಗೆ ವಿಷ ಕುಡಿಸಿ ಗಂಡನ ಮನೆಯವರು ಹತ್ಯೆ ಮಾಡಿದ್ದಾರೆ ಎಂದು ಮೃತ ಯುವತಿ ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಸಂಬಂಧ ಕನಕಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಕುರಿತು ಮಾತನಾಡಿರುವ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಎಲ್ ಅರಸಿದ್ದಿ, ಪ್ರಕರಣ ಸಂಬಂಧ 13 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಯುವತಿಯ ಪತಿ ಹನುಮಯ್ಯ ಹಾಗೂ ತಂದೆ ಕಾಳಿಂಗಪ್ಪ ಮತ್ತು ತಾಯಿ ಸೇರಿದಂತೆ 7 ಜನರನ್ನು ಬಂಧಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಕೆಲವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಇನ್ನಷ್ಟು ಮಾಹಿತಿ ಹೊರಬರಬೇಕಿದೆ ಎಂದು ತಿಳಿಸಿದ್ಧಾರೆ.