

| ಸುಚೇತನಾ ನಾಯ್ಕ
‘ಉದ್ಯೋಗಂ ಪುರುಷ ಲಕ್ಷಣಂ’ ಎಂದು ಹೇಳುವ ಕಾಲ ಎಂದೋ ಹೊರಟೋಗಿದೆ. ಗಂಡು- ಹೆಣ್ಣು ಒಟ್ಟಾಗಿ ದುಡಿದರೆ ಒಂದಿಷ್ಟು ಹಣವನ್ನು ಭವಿಷ್ಯಕ್ಕಾಗಿ ಕೂಡಿಡಬಹುದು ಎಂಬ ಕಾಲ ಬಂದು ದಶಕಗಳೇ ಉರುಳಿವೆ. ಎಷ್ಟೋ ಮಹಿಳೆಯರಿಗೆ ಸಂಪಾದಿಸಬೇಕೆಂಬ ಹಂಬಲ, ಆಲೋಚನೆ ಇದ್ದರೂ ಮನೆಯಿಂದ ಹೊರಹೋಗಿ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಮನೆಯಲ್ಲಿದ್ದುಕೊಂಡೇ ಉದ್ಯಮ ಶುರು ಮಾಡೋಣವೆಂದರೆ ಅದಕ್ಕೂ ದಾರಿ ಕಾಣುವುದಿಲ್ಲ.
ಅಂಥವರಿಗೆ ವರವಾಗಿ ಬಂದಿದೆ ‘ವಿಮೆನ್ ವಿಲ್’. ವಿಲ್ ಎನ್ನುವ ಇಂಗ್ಲಿಷ್ ಶಬ್ದಕ್ಕೆ ಹಲವು ಅರ್ಥಗಳಿವೆ. ಅದು ಭವಿಷ್ಯದ ಸೂಚಕವೂ ಹೌದು, ಸಾಧಿಸಬಲ್ಲೆವು ಎಂಬ ಅರ್ಥ ಕೊಡುವ ಪದವೂ ಹೌದು. ಅಂದ ಹಾಗೆ ವಿಮೆನ್ ವಿಲ್ ಎನ್ನುವುದು ಒಂದು ವೆಬ್ ಪೋರ್ಟಲ್. ಇದನ್ನು ಟಾಟಾ ಟ್ರಸ್ಟ್ ಸಹಯೋಗದಲ್ಲಿ ಗೂಗಲ್ ಸಂಸ್ಥೆ ಇದೇ ಮಾರ್ಚ್ 8ರ ಅಂತಾರಾಷ್ಟ್ರೀಯ ಮಹಿಳಾ ದಿನದಂದು ಶುರು ಮಾಡಿದೆ. ಮಹಿಳೆಯರನ್ನು ಸಶಕ್ತ ಉದ್ಯಮಿಗಳನ್ನಾಗಿ ಮಾಡುವುದು ಇದರ ಗುರಿ. ಹವ್ಯಾಸವಾಗಿರುವ ಕೆಲವು ಕಲೆಗಳಿಂದ ಹಣ ಗಳಿಸುವುದನ್ನು ಸುಲಭವಾಗಿಸುವ ಉದ್ದೇಶ ಇದರದು. ಅದರಲ್ಲಿಯೂ ಗ್ರಾಮೀಣ ಭಾಗದ ಮಹಿಳೆಯರಿಗೆ ಅವರು ಇರುವ ಜಾಗದಲ್ಲಿ ಅವಕಾಶಗಳು ಕಡಿಮೆ. ನಗರ ಪ್ರದೇಶದ ಮಹಿಳೆಯರಿಗಿಂತ ಹೆಚ್ಚು ಪ್ರತಿಭೆ ಇದ್ದರೂ ಅವರಿಗೆ ಸೂಕ್ತ ಮಾರ್ಗದರ್ಶನ ಸಿಗುವುದು ಅಪರೂಪ. ಆದರೂ ಸ್ವಸಹಾಯ ಸಂಘಗಳು, ಗುಡಿ, ಗೃಹ ಕೈಗಾರಿಕೆಯನ್ನು ಶುರು ಮಾಡುವ ಮೂಲಕ ದೇಶದ ಆರ್ಥಿಕತೆಗೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ ಗ್ರಾಮೀಣ ಮಹಿಳೆಯರು.
ಇಂಥವರನ್ನೇ ಗುರಿಯಾಗಿಸಿಕೊಂಡು ಇನ್ನಷ್ಟು ಪ್ರೋತ್ಸಾಹ, ಮಾರ್ಗದರ್ಶನ ನೀಡುವ ಉದ್ದೇಶದಿಂದ ಈ ಪೋರ್ಟಲ್ ಶುರುವಾಗಿದೆ. ಇಂಟರ್ನೆಟ್ ಸೌಲಭ್ಯವಿಲ್ಲದ ಹಳ್ಳಿಗಳು ಇಲ್ಲವೇ ಇಲ್ಲ ಎನ್ನಬಹುದೇನೋ. ಮಹಿಳೆಯರು ನೆಟ್ ಸೌಲಭ್ಯ ಬಳಸಿಕೊಂಡು ತಮ್ಮಿಷ್ಟದ ಉದ್ಯಮದ ಬಗ್ಗೆ ಮಾಹಿತಿ ಪಡೆಯಬಹುದು. ಸದ್ಯ ಈ ಪೋರ್ಟಲ್ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಮಾತ್ರ ಲಭ್ಯ ಇದೆ. ಮುಂದಿನ ದಿನಗಳಲ್ಲಿ ಸ್ಥಳೀಯ ಭಾಷೆಗಳಲ್ಲಿಯೂ ಇದು ಲಭ್ಯವಾಗಲಿದೆ.
ಕಾರ್ಯನಿರ್ವಹಣೆ ಹೇಗೆ?: ನೀವು https://womenwill.google/intl/en_in/india/skilling/ ಲಿಂಕ್ ಕ್ಲಿಕ್ ಮಾಡಿದರೆ ಒಂದು ವೆಬ್ಸೈಟ್ ತೆರೆದುಕೊಳ್ಳುತ್ತದೆ. ಮೊಬೈಲ್ ಫೋನ್ನಲ್ಲಿಯೂ ಸುಲಭವಾಗಿ ತೆರೆಯುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ. ಹೊಸ ಕೌಶಲ ಕಲಿಯುವುದು ಹೇಗೆ? ನಿಮ್ಮ ಉದ್ಯಮಕ್ಕೆ ಸಹಾಯ ಪಡೆಯುವುದು ಹೇಗೆ? ಆ ಮೂಲಕ ಹಣ ಗಳಿಸುವುದು ಹೇಗೆ? ಇಂಟರ್ನೆಟ್ನಲ್ಲಿ ಸುರಕ್ಷಿತವಾಗಿ ವ್ಯವಹರಿಸುವುದು ಹೇಗೆ ಎಂಬ ನಾಲ್ಕು ವಿಭಾಗಗಳು ಇದರಲ್ಲಿವೆ. ನಿಮಗೆ ಯಾವ ವಿಭಾಗ ಬೇಕೋ ಅದನ್ನು ಆಯ್ಕೆ ಮಾಡಿಕೊಳ್ಳಬೇಕು.
ಹಣ ಗಳಿಸುವ ವಿಭಾಗದಲ್ಲಿ ಟೈಲರಿಂಗ್, ಬ್ಯೂಟಿ ಪಾರ್ಲರ್, ಕಿರಾಣಿ ಅಂಗಡಿ, ಜೆರಾಕ್ಸ್ ಅಂಗಡಿ, ಟ್ಯೂಷನ್ ಅಥವಾ ಕೋಚಿಂಗ್ ಸೆಂಟರ್ ಶುರು ಮಾಡುವ ಬಗ್ಗೆ ವಿವರಣೆ ನೀಡಲಾಗಿದೆ. ನಿಮಗೆ ಯಾವುದರಲ್ಲಿ ಆಸಕ್ತಿ ಇದೆಯೋ ಅದನ್ನು ಕ್ಲಿಕ್ ಮಾಡಿದರೆ ಅದರಲ್ಲಿ ಆ ವಿಷಯಕ್ಕೆ ಸಂಬಂಧಿಸಿದ ಸಂಪೂರ್ಣ ವಿವರಗಳು ಸಿಗುತ್ತವೆ. ಈ ವಿಷಯ ನಿಮಗೆ ಸಂಪೂರ್ಣ ಅಪರಿಚಿತವಾಗಿದ್ದರೂ, ಅದನ್ನು ಶುರು ಮಾಡುವ ಬಗೆಯಿಂದ ಹಿಡಿದು ಮಾರುಕಟ್ಟೆ ಹೇಗೆ ಎಂಬ ಬಗ್ಗೆ ಪೂರ್ಣ ಮಾಹಿತಿ ಲಭ್ಯವಾಗುತ್ತದೆ. ನೀವು ಆಯ್ಕೆ ಮಾಡುವ ಉದ್ಯಮದಲ್ಲಿ ಏನೇನು ಇರುತ್ತದೆ? ನಿಮಗೆ ಅದರಲ್ಲಿಯೂ ಏನು ಇಷ್ಟ ಎಂಬುದನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಕೂಡ ಇದ್ದು, ವಿಡಿಯೋ ಮೂಲಕ ಕೂಡ ನೀವು ಮಾಹಿತಿ ಪಡೆಯಬಹುದಾಗಿದೆ.
ಹೊಸ ಕೌಶಲ ಕಲಿಯಿರಿ ಎಂಬ ವಿಭಾಗದಲ್ಲಿ ನಿಮಗೆ ತಿಳಿಯದೇ ಇರುವ ವಿಷಯಗಳನ್ನೂ ಕಲಿಯಲು ಅವಕಾಶವಿದೆ. ನಿಮ್ಮ ಉದ್ಯಮಕ್ಕೆ ಸಹಾಯ ಪಡೆಯುವುದು ಹೇಗೆ ಎಂಬ ವಿಭಾಗದಲ್ಲಿ ಆನ್ಲೈನ್ ವಹಿವಾಟಿನ ಮೂಲಕ ಹೇಗೆ ವ್ಯವಹಾರ ಕುದುರಿಸಿಕೊಳ್ಳಬಹುದು ಎಂಬ ಮಾಹಿತಿ ನೀಡಲಾಗಿದೆ. ಇಂಟರ್ನೆಟ್ ವಿಭಾಗದಲ್ಲಿ ನಿಮ್ಮ ವ್ಯವಹಾರದ ಕುರಿತು ಇಂಟರ್ನೆಟ್ ಬಳಕೆ ಮಾಡುವಾಗ ಯಾವೆಲ್ಲಾ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬ ಮಾಹಿತಿ ನೀಡಲಾಗಿದೆ.
ಮಹಿಳಾ ಉದ್ಯಮಿಗಳು ಮತ್ತು ಭಾರತ: ಭಾರತದಲ್ಲಿರುವ ಒಟ್ಟು ಉದ್ಯಮಿಗಳ ಪೈಕಿ ಮಹಿಳೆಯರ ಸಂಖ್ಯೆ 13.76%. ಇದರರ್ಥ 58.5 ದಶಲಕ್ಷ ಉದ್ಯಮಿಗಳಲ್ಲಿ 8.05 ದಶಲಕ್ಷ ಉದ್ಯಮಿಗಳು ಸ್ತ್ರೀಯರು. ಮಹಿಳೆಯರ ಒಡೆತನದ ಒಟ್ಟು ವ್ಯವಹಾರದಲ್ಲಿ 13.45 ದಶಲಕ್ಷ ಜನರಿಗೆ ಉದ್ಯೋಗ ಸಿಕ್ಕಿದೆ. ಈ ಪೈಕಿ 2.76 ದಶಲಕ್ಷ (ಒಟ್ಟು ಉದ್ಯಮಿಗಳಲ್ಲಿ 34.3%) ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರೆ, 5.29 ದಶಲಕ್ಷ ಮಹಿಳೆಯರು (ಒಟ್ಟು ಉದ್ಯಮಿಗಳಲ್ಲಿ 65.7%) ಕೃಷಿಯೇತರ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ.