

New Delhi: ದೆಹಲಿಯಲ್ಲಿ ಮಹಿಳೆಯೊಬ್ಬಳ ವಿವಾಹೇತರ ಸಂಬಂಧವೂ(Extramarital affair)
ಇಬ್ಬರನ್ನು ಸಾರ್ವಜನಿಕವಾಗಿ ಬಲಿ ತೆಗೆದುಕೊಂಡಿದ್ದು, ಪತಿ ಆಸ್ಪತ್ರೆಯಲ್ಲಿ ಜೀವನ್ಮರಣದ ಹೋರಾಟದಲ್ಲಿರುವಂತೆ ಮಾಡಿದೆ. ಈ ಘಟನೆಯೂ ಸ್ಥಳೀಯ ಪ್ರದೇಶದಲ್ಲಿ ಭೀತಿಯನ್ನುಂಟು ಮಾಡಿದೆ.
ದೆಹಲಿಯ ರಾಮ್ನಗರ ಪ್ರದೇಶದಲ್ಲಿ ಶನಿವಾರ ಸಾರ್ವಜನಿಕರ ಮುಂದೆಯೇ ಶಾಲಿನಿ(22) ಎಂಬ ಗರ್ಭಿಣಿ ಮಹಿಳೆಯನ್ನು ಆಕೆಯ ಪ್ರಿಯಕರ ಶೈಲೇಂದ್ರ ಇರಿದು ಕೊಂದಿದ್ದಾನೆ. ಅದೇ ಚಾಕು ತೆಗೆದುಕೊಂಡು ಆಕೆಯ ಪತಿ ಆಕಾಶ್ ಪ್ರಿಯಕರ ಶೈಲೇಂದ್ರನನ್ನು ಇರಿದು ಕೊಲೆ ಮಾಡಿದ್ದಾನೆ. ಈ ಗಲಾಟೆಯಲ್ಲಿ ಆಕಾಶ್ಗೆ ತೀವ್ರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯ ಹಿನ್ನೆಲೆ ಏನು?
22 ವರ್ಷದ ಗೃಹಿಣಿ ಶಾಲಿನಿ ಇಬ್ಬರು ಹೆಣ್ಣು ಮಕ್ಕಳ ತಾಯಿಯಾಗಿದ್ದರು. ಅವರ ಪತಿ 23 ವರ್ಷದ ಆಕಾಶ್ ಇ-ರಿಕ್ಷಾ ಚಾಲಕನಾಗಿದ್ದ. ಸ್ವಲ್ಪ ತಿಂಗಳ ಹಿಂದೆ ಗಂಡನ ಜೊತೆ ವೈಮನಸ್ಸಿಂದ ಬೇರೆಡೆ ವಾಸಿಸುವಾಗ 34 ವರ್ಷದ ಶೈಲೇಂದ್ರ ಎಂಬ ಸ್ಥಳೀಯ ಕ್ರಿಮಿನಲ್ ಅಪರಾಧಿ ಜೊತೆ ಶಾಲಿನಿ ವಿವಾಹೇತರ ಸಂಬಂಧ ಹೊಂದಿದ್ದಳು ಎನ್ನಲಾಗಿದೆ.
ಈ ವೇಳೆ ಶಾಲಿನಿ ಗರ್ಭಿಣಿಯಾಗಿದ್ದಾಳೆ. ಆದರೆ ಪತಿ ಆಕಾಶ್ ಜೊತೆ ಮನೆಯವರು ರಾಜಿ ಮಾಡಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ಪ್ರಿಯಕರ ಶೈಲೇಂದ್ರ ಹೊಟ್ಟೆಯಲ್ಲಿರುವ ಮಗು ನನ್ನದು ಎಂದು ನನ್ನ ಜೊತೆ ವಾಸ ಮಾಡುವಂತೆ ಒತ್ತಾಯಿಸುತ್ತಿದ್ದ ಎನ್ನಲಾಗಿದೆ. ಇದಕ್ಕೆ ಶಾಲಿನಿ ವಿರೋಧ ವ್ಯಕ್ತಪಡಿಸಿದ್ದು, ಪತಿ ಜೊತೆ ಇರಲು ಇಷ್ಟಪಟ್ಟಿದ್ದಾಳೆ.
ಇದರಿಂದ ಕೋಫಗೊಂಡಿದ್ದ ಪ್ರಿಯಕರ ಶೈಲೇಂದ್ರ, ನಿನ್ನೆ ತಡರಾತ್ರಿ ಆಕಾಶ್ ಮತ್ತು ಶಾಲಿನಿ ಕುತುಬ್ ರಸ್ತೆಯಲ್ಲಿ ತಮ್ಮ ತಾಯಿಯನ್ನು ಭೇಟಿಯಾಗಲು ಹೋಗಿದ್ದಾಗ ಅವರ ಮೇಲೆ ದಾಳಿ ಮಾಡಿದ್ದಾನೆ. ಮೊದಲು ಶಾಲಿನ ಪತಿ ಆಕಾಶ್ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದಾನೆ. ಆದರೆ ಅವನು ತಪ್ಪಿಸಿಕೊಂಡಿದ್ದಾನೆ. ಬಳಿಕ ಇ-ರಿಕ್ಷಾದಲ್ಲಿ ಶಾಲಿನಿ ಇರುವುದನ್ನು ಗಮನಿಸಿ ಆಕೆಗೆ ಹಲವು ಬಾರಿ ಇರಿದು ಕೊಂದಿದ್ದಾನೆ.
ಆಕಾಶ್ ತನ್ನ ಹೆಂಡತಿಯನ್ನು ಉಳಿಸಲು ಪ್ರಯತ್ನಿಸಿದಾಗ ಅವನಿಗೂ ಇರಿತವಾಗಿದ್ದು, ಆದರೆ ಅದೇ ಚಾಕುವನ್ನು ಆಕಾಶ್ ಕಸಿದುಕೊಂಡು ಶೈಲೆಂದ್ರನನ್ನ ಇರಿದು ಕೊಲೆ ಮಾಡಿದ್ದಾನೆ. ಶಾಲಿನಿಯ ಸಹೋದರ ರೋಹಿತ್ ತಕ್ಷಣ ಆಕೆ ಮತ್ತು ಆಕೆಯ ಪತಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಶಾಲಿನಿ ಮೃತಪಟ್ಟಿದ್ದಾರೆ. ಆಕಾಶ್ಗೆ ಗಂಭೀರ ಗಾಯಗಳಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.
ಮೃತ ಶಾಲಿನಿ ತಾಯಿ ಶೀಲಾ ಅವರ ದೂರಿನನ್ವಯ ಪೊಲೀಸರು ಕೊಲೆ ಮತ್ತು ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದು, ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. (ಏಜೆನ್ಸೀಸ್)