

Chennai: ತಮಿಳುನಾಡಿನಲ್ಲಿ ಕಳೆದು ತಿಂಗಳು ಸೆ. 27ರಂದು ಕರೂರಿನಲ್ಲಿ ನಡೆದ ಕಾಲ್ತುಳಿತದಲ್ಲಿ ಮೃತಪಟ್ಟ 41 ಮಂದಿಯ ಸಂತ್ರಸ್ತ ಕುಟುಂಬಗಳಿಗೆ ಕೊಟ್ಟ ಮಾತಿನಂತೆ ಟಿವಿಕೆ ಮುಖ್ಯಸ್ಥ ಮತ್ತು ಸೂಪರ್ ಸ್ಟಾರ್ ದಳಪತಿ ವಿಜಯ್(Thalapathy Vijay) ಶನಿವಾರ(ಅ. 18) ತಲಾ 20 ಲಕ್ಷ ರೂ. ಪರಿಹಾರ ನೀಡಿದ್ದಾರೆ ಎಂದು ವರದಿಯಾಗಿದೆ.
ತಮಿಳಿಗ ವೆಟ್ರಿ ಕಳಗಂ ಪಕ್ಷದ ಮೂಲಗಳ ಪ್ರಕಾರ, ಮೃತ 41 ಜನರಲ್ಲಿ 39 ಜನರ ಕುಟುಂಬಗಳಿಗೆ ಪಕ್ಷವು ತಲಾ 20 ಲಕ್ಷ ರೂ.ಗಳನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದೆ. ಇನ್ನಿಬ್ಬರ ಬ್ಯಾಂಕ್ ಖಾತೆ ವಿವರಗಳಲ್ಲಿನ ವ್ಯತ್ಯಾಸಗಳಿಂದಾಗಿ ಬಾಕಿ ಉಳಿದಿದ್ದು, ಅವುಗಳನ್ನು ಸರಿಪಡಿಸಲಾಗುತ್ತಿದೆ. ಕುಟುಂಬಗಳಿಗೆ ಸಾಂತ್ವನ ಹೇಳಲು ಕರೂರ್‌ಗೆ ಭೇಟಿ ನೀಡುವ ಮೊದಲು ಪರಿಹಾರವನ್ನು ವಿತರಿಸಲು ವಿಜಯ್ ಸೂಚಿಸಿದ್ದರು ಎನ್ನಲಾಗಿದೆ.
ಈ ನಡುವೆ ದಳಪತಿ ವಿಜಯ್ ಸಹಿ ಮಾಡಿದ್ದಾರೆ ಎನ್ನಲಾದ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸೂಕ್ತ ಅನುಮತಿ ಪಡೆದ ಸಂತ್ರಸ್ತ ಕುಟುಂಬಗಳನ್ನು ವೈಯಕ್ತಿಕವಾಗಿ ಭೇಟಿಯಾಗುತ್ತೇನೆ. ಇದಕ್ಕಾಗಿ ಪಕ್ಷವೂ ಕಾನೂನು ಪ್ರಕ್ರಿಯೆಗಳನ್ನು ಆರಂಭಿಸಿದೆ ಎಂದು ಹೇಳಿದ್ದಾರೆ.
ಈಗಾಗಲೇ ಕಾಲ್ತುಳಿತದಲ್ಲಿ ಮೃತಪಟ್ಟ ಕುಟುಂಬಗಳಿಗೆ ತಮಿಳುನಾಡು ಸಿಎಂ ತಲಾ 10 ಲಕ್ಷ ರೂ. ಪರಿಹಾರ ಘೋಷಿಸಿದ್ದರು. ಬಳಿಕ ಸಾಂತ್ವನ ಹೇಳಿಕೆ ಗಾಯಾಳುಗಳಿಗೆ ಸೇರಿ ಸಂಬಂಧಿಕರಿಗೆ ಚೆಕ್ ಅನ್ನು ಹಸ್ತಾಂತರಿಸಿದ್ದರು. ಕಾಂಗ್ರೆಸ್ ತಲಾ 2.5 ಲಕ್ಷ ರೂ.ಗಳನ್ನು, ಎಂಎನ್‌ಎಂ ತಲಾ 1 ಲಕ್ಷ ರೂ.ಗಳನ್ನು ಹಾಗೂ ವಿಸಿಕೆ ತಲಾ 50,000 ರೂ.ಗಳನ್ನು ನೀಡಿತ್ತು. (ಏಜೆನ್ಸೀಸ್)