

ದೆಹಲಿ: ಮಹಿಳೆಯ ದೇಹದ ಭಾಗಗಳನ್ನು ತುಂಡು.. ತುಂಡಾಗಿ ಕತ್ತರಿಸಿ ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ ದೆಹಲಿಯ ಸರಾಯ್ ಕಾಲೆ ಖಾನ್‌ನಲ್ಲಿ ರಾಪಿಡ್ ಮೆಟ್ರೋ ನಿರ್ಮಾಣ ಸೈಟ್ ಬಳಿ ಎಸೆದಿರುವ ಘಟನೆ ನಡೆದಿದೆ.
ಮಧ್ಯಾಹ್ನ 12 ಗಂಟೆಯ ಸುಮಾರಿಗೆ ರಾಪಿಡ್ ಮೆಟ್ರೋದ ನಿರ್ಮಾಣ ಹಂತದ ಪ್ರದೇಶದಲ್ಲಿ ದೇಹದ ಭಾಗಗಳ ಬಗ್ಗೆ ಸನ್ಲೈಟ್ ಕಾಲೋನಿ ಪೊಲೀಸ್ ಠಾಣೆಗೆ ಮಾಹಿತಿ ಲಭ್ಯವಾಗಿದೆ. ಮಹಿಳೆಯ ತಲೆಬುರುಡೆ, ಕೊಳೆತು ವಿರೂಪಗೊಂಡ ದೇಹದ ಭಾಗಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ದೆಹಲಿ ಪೊಲೀಸ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದೆಹಲಿ ಪೊಲೀಸ್ ಮತ್ತು ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್ಎಸ್ಎಲ್) ಅಪರಾಧ ತಂಡವು ಸ್ಥಳವನ್ನು ಪರಿಶೀಲಿಸಿದೆ. ಪತ್ತೆಯಾದ ಭಾಗಗಳನ್ನು ಮುಂದಿನ ಕ್ರಮಕ್ಕಾಗಿ ಏಮ್ಸ್ ಆಸ್ಪತ್ರೆಗೆ ವರ್ಗಾಯಿಸಲಾಗಿದೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದು, ಪತ್ತೆಯಾದ ಛಿದ್ರಗೊಂಡ ಮೃತದೇಹದ ಗುರುತು ಪತ್ತೆ ಹಚ್ಚಲು ಶೋಧ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.