

ನ್ಯೂಯಾರ್ಕ್: ಆನ್ಲೈನ್ನಲ್ಲಿ ಆಹಾರ ಆರ್ಡರ್ ಮಾಡುವ ಗ್ರಾಹಕರಿಗೆ ಇತ್ತೀಚಿಗೆ ಆಹಾರದಲ್ಲಿ ಹುಳ, ಪ್ರಾಣಿಗಳು ಸಿಗುತ್ತಿರುವ ಪ್ರಕರಣಗಳು ಕೇಳಿ ಬರುತ್ತಿವೆ. ಈಗ ಅಮೆರಿಕಾದ ಮಹಿಳೆಯೊಬ್ಬರಿಗೆ ಸೂಪ್‌ನಲ್ಲಿ ಇಲಿ ಸಿಕ್ಕಿದೆ. ಇದರಿಂದ ಆಕ್ರೋಶಗೊಂಡ ಮಹಿಳೆ ರೆಸ್ಟೋರೆಂಟ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಾರೆ.
ಯುನೈಟೆಡ್ ಸ್ಟೇಟ್ಸ್‌ನ ಮ್ಯಾನ್‌ಹ್ಯಾಟನ್‌ನಲ್ಲಿರುವ ಕೊರಿಯಾಟೌನ್ ರೆಸ್ಟೋರೆಂಟ್ ಗ್ಯಾಮಿಯೋಕ್‌ನಿಂದ ಪಾರ್ಸೆಲ್ ತರಿಸಿದ ತರಕಾರಿ ಸೂಪ್‌ನ ಬಾಕ್ಸ್‌ನಲ್ಲಿ ಇಲಿಯೊಂದು ಕಾಣುತ್ತಿದ್ದು, ಈಗ ಮಹಿಳೆ ಈ ರೆಸ್ಟೋರೆಂಟ್ ವಿರುದ್ಧ ಮೊಕದ್ದಮೆ ದಾಖಲಿಸಿದ್ದಾರೆ. ಕಳೆದ ಬುಧವಾರ (ಮಾ.15) ಈ ಘಟನೆ ನಡೆದಿದ್ದು, ಘಟನೆಯ ನಂತರ ಆರೋಗ್ಯ ಮತ್ತು ಮಾನಸಿಕ ನೈರ್ಮಲ್ಯ ಇಲಾಖೆಯು ರೆಸ್ಟೋರೆಂಟ್ ಅನ್ನು ಮುಚ್ಚಿದೆ. ಈ ವಿಚಾರವನ್ನು ದಂಪತಿ ವಿಡಿಯೋ ಸಮೇತ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದು ವೈರಲ್ ಆಗಿದ್ದು, ನೆಟ್ಟಿಗರು ಕೂಡ ರೆಸ್ಟೋರೆಂಟ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಪೋಸ್ಟ್‌ಗೆ ಗ್ಯಾಮೀಯಕ್ ರೆಸ್ಟೋರೆಂಟ್ ಕೂಡ ಪ್ರತಿಕ್ರಿಯಿಸಿದ್ದು, ಈ ಪರಿಸ್ಥಿತಿಗಾಗಿ ನಾವು ವಿಷಾದಿಸುತ್ತೇವೆ. ಪೋಸ್ಟ್ ಮಾಡಿರುವ ವಿಚಾರ ಸತ್ಯವಲ್ಲ. ಹಲವಾರು ವರ್ಷಗಳಿಂದ ಸೋಂಕು ನಿವಾರಕ ಕಂಪನಿಯಿಂದ ಪ್ರತಿ ಎರಡು ವಾರಗಳಿಗೊಮ್ಮೆ ನಮ್ಮ ರೆಸ್ಟೋರೆಂಟ್ ಅನ್ನು ನಾವು ನಿಯಮಿತವಾಗಿ ಪರಿಶೀಲಿಸುತ್ತಿದ್ದೇವೆ. ಇಲಿಗಳ ಯಾವುದೇ ಕುರುಹುಗಳಿಲ್ಲ. ಅವರು ಹಣಕ್ಕಾಗಿ ಒತ್ತಾಯಿಸಿ ಬೆದರಿಕೆ ಹಾಕಿದ್ದು, ನಾವು ನಿರಾಕರಿಸಿದ್ದರಿಂದ ಸಾಮಾಜಿಕ ಜಾಲತಾಣಗಳ ಮೂಲಕ ಈ ರೀತಿ ಮಾಡಲು ಮುಂದಾಗಿದ್ದಾರೆ. ಅವರ ವಿರುದ್ಧ ನಾವು ಕಾನೂನು ಕ್ರಮ ಜರುಗಿಸಲು ಮುಂದಾಗಿದ್ದೇವೆ ಎಂದು ರೆಸ್ಟೋರೆಂಟ್ ಹೇಳಿದೆ.
ನ್ಯೂಯಾರ್ಕ್ ಸಿಟಿಯ ಯಾವುದೇ ರೆಸ್ಟೋರೆಂಟ್ ಮೆನುವಿನಲ್ಲಿ ಇಲಿಗಳ ಖಾದ್ಯ ನೀಡುವ ಅವಕಾಶವಿಲ್ಲ. ನಾವು ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ ಎಂದು ಮೇಯರ್ ಎರಿಕ್ ಆಡಮ್ಸ್ ಅವರ ವಕ್ತಾರ ಫ್ಯಾಬಿಯನ್ ಲೆವಿ ಅಲ್ಲಿನ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.