ಕಿನ್ನಿಗೋಳಿ: ಮದುವೆ ನಿಶ್ಚಿತಾರ್ಥವಾಗಿದ್ದ ಯುವತಿಯೊಬ್ಬರು ಕಟೀಲು ಸಮೀಪದಲ್ಲಿ ನಂದಿನಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ಬೆಳಗ್ಗೆ ಸಂಭವಿಸಿದೆ. ಮೂಲ್ಕಿ ಸಮೀಪದ ಮೊಯಿಲೊಟ್ಟು ನಿವಾಸಿ ಸುಜಾತಾ(30) ಆತ್ಮಹತ್ಯೆ ಮಾಡಿಕೊಂಡ ಯುವತಿ ಎಂದು ಗುರುತಿಸಲಾಗಿದೆ.
ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಈ ಮಧ್ಯೆ ಸುಜಾತಾ ಮೊಯಿಲೊಟ್ಟುವಿನ ತಮ್ಮ ಮನೆಯಿಂದ ಬಡಗ ಎಕ್ಕಾರು ಗ್ರಾಮದ ಮಚ್ಚಾರು ಎಂಬಲ್ಲಿ ಇರುವ ತಮ್ಮ ದೊಡ್ಡಮ್ಮನ ಮನೆಗೆ ಬಂದ್ದಿದ್ದವಳು. ಬುಧವಾರ ಬೆಳಗ್ಗೆ ಮನೆಯ ಸಮೀಪದಲ್ಲಿಯೇ ನಂದಿನಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಶ್ಚಿತಾರ್ಥವಾಗಿದ್ದ ಮದುವೆ ಇಷ್ಟವಿರಲಿಲ್ಲ
ನಿಶ್ಚಿತಾರ್ಥವಾಗಿದ್ದ ಮದುವೆ ಸುಜಾತಾಳಿಗೆ ಇಷ್ಟವಿರಲಿಲ್ಲ ಎಂದು ಹೇಳಲಾಗಿದ್ದು, ಮನೆಯವರ ಒತ್ತಾಯಕ್ಕಾಗಿ ಒಪ್ಪಿಕೊಂಡಿದ್ದಳು ಎನ್ನಲಾಗಿದೆ. ಈ ಮಧ್ಯೆ ಸುಜಾತಾ ಕಾಣೆಯಾದ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಮನೆಯವರು ದೂರನ್ನು ನೀಡಿದ್ದರು.
ನಂದಿನಿ ನದಿಯಲ್ಲಿ ಮೃತದೇಹ ಪತ್ತೆ
ಬುಧವಾರ ಮಧ್ಯಾಹ್ನ ಒಂದು ಗಂಟೆಯ ಸುಮಾರಿಗೆ ಮಚ್ಚಾರು ಸಮೀಪದಲ್ಲಿಯೇ ನಂದಿನಿ ನದಿಯಲ್ಲಿ ಸುಜಾತಾಳ ಮೃತದೇಹ ಪತ್ತೆಯಾಗಿದೆ.