ಶ್ವಾನದ ರಕ್ತದಿಂದ ಮಾಂತ್ರಿಕ ಆಚರಣೆ! ಪುನರ್ಜನ್ಮಕ್ಕಾಗಿ ಯುವತಿ ತಾನು ಸಾಕಿದ್ದ ನಾಯಿಯನ್ನೇ ಕೊಂದಳು..pet dog

Dog
Published on

 pet dog :  ಮಹಿಳೆಯೊಬ್ಬಳು ತಾನು ಸಾಕಿದ್ದ ನಾಯಿಯನ್ನೇ ಹತ್ಯೆ ಮಾಡಿ, ಕೊಳೆತು ನಾರುತ್ತಿದ್ದ ನಾಯಿಯ ಮೃತದೇಹದೊಂದಿಗೆ ವಾಸವಿದ್ದ ಶಾಕಿಂಗ್ ಘಟನೆಯೊಂದು ಬೆಂಗಳೂರಿನ ಮಹದೇವಪುರದ ಅಪಾರ್ಟ್ಮೆಂಟ್​ವೊಂದರಲ್ಲಿ ಬೆಳಕಿಗೆ ಬಂದಿದೆ.

ತ್ರಿಪರ್ಣ ಪೈಕ್ ಎಂಬ ಬಂಗಾಳಿ ಮಹಿಳೆ ತನ್ನ ಸಾಕು ನಾಯಿಯನ್ನು ತನ್ನ ಅಪಾರ್ಟ್ಮೆಂಟ್​​ನಲ್ಲಿ ಕೊಂದಿದ್ದಾಳೆ. ಅವಳು ಅದರ ರಕ್ತದಿಂದ ತಂತ್ರ-ಮಂತ್ರವನ್ನು ಮಾಡಿದ್ದಾಳೆ ಎಂದು ಹೇಳಲಾಗುತ್ತಿದೆ. ಪೊಲೀಸರು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ನಡೆದಿದ್ದೇನು?:

ತ್ರಿಪರ್ಣ ಪೈಕ್ ವಾಸವಾಗಿದ್ದ ಅಪಾರ್ಟ್‌ಮೆಂಟ್‌ನಿಂದ ಕೆಟ್ಟ ವಾಸನೆ ಬರುತ್ತಿತ್ತು. ಇದನ್ನು ಗಮನಿಸಿದ ಸ್ಥಳೀಯರು ಬಿಬಿಎಂಪಿಗೆ ಮಾಹಿತಿ ನೀಡಿದರು. ಅಧಿಕಾರಿಗಳು ಅಪಾರ್ಟ್‌ಮೆಂಟ್ ಅನ್ನು ಪರಿಶೀಲಿಸಿದಾಗ ದುರ್ವಾಸನೆಯ ಮೂಲ ಪತ್ತೆಗೆ ಮುಂದಾದಾಗ ಕೊಳೆತು ನಾರುತ್ತಿದ್ದ ನಾಯಿಯ ಶವವೊಂದು ಪತ್ತೆಯಾಗಿದೆ. ಕೊಠಡಿಯಲ್ಲಿ ಬಚ್ಚಿಟ್ಟಿದ್ದ ನಾಯಿಯ ಮೃತದೇಹದ ಸುತ್ತಮುತ್ತ ದೇವರ ಫೋಟೊಗಳಿದ್ದು, ವಾಮಾಚಾರಕ್ಕಾಗಿ ಸಾಕು ನಾಯಿಯನ್ನು ಹತ್ಯೆಗೈದಿರುವುದಾಗಿ ಸ್ಥಳೀಯ ನಿವಾಸಿಗಳು ದೂರಿದ್ದಾರೆ. ಅಪಾರ್ಟ್‌ಮೆಂಟ್‌ನಲ್ಲಿ ದೇವರುಗಳ ಚಿತ್ರಗಳು ಮತ್ತು ಪೂಜಾ ಸಾಮಗ್ರಿಗಳು ಸಹ ಕಂಡುಬಂದಿವೆ.

ಮಹಿಳೆ ತಾನು ಸಾಕಿದ್ದ ಲ್ಯಾಬ್ರಡಾರ್ ನಾಯಿಯ ಕತ್ತು ಸೀಳಿದಳು. ನಂತರ ಅದರ ದೇಹವನ್ನು ಬಟ್ಟೆಯಲ್ಲಿ ಸುತ್ತಿ ಶ್ರೀ ಯಂತ್ರದಿಂದ ಪೂಜೆ ಸಲ್ಲಿಸಿದಳು. ತ್ರಿಪರ್ಣ ಪೈಕ್ ಕಳೆದ ನಾಲ್ಕು ದಿನಗಳಿಂದ ನಾಯಿಯ ಮೃತದೇಹದೊಂದಿಗೆ ಮನೆಯಲ್ಲಿ ವಾಸಿಸುತ್ತಿದ್ದಳು.

ಮಹದೇವಪುರ ಪೊಲೀಸರು ತ್ರಿಪರ್ಣ ಪೈಕ್ ವಿರುದ್ಧ ಪ್ರಾಣಿ ಹಿಂಸೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಅವರು ತಾಂತ್ರಿಕ ಆಚರಣೆಯನ್ನು ಏಕೆ ಮಾಡಿದರು ಎಂಬುದನ್ನು ಕಂಡುಹಿಡಿಯಲು ತನಿಖೆ ನಡೆಯುತ್ತಿದೆ.

ಆರಂಭಿಕ ತನಿಖೆಗಳು ಆಕೆ ಮಾನಸಿಕ ಸ್ಥಿತಿಯ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕಿವೆ. ತ್ರಿಪರ್ಣ ಪೊಲೀಸರಿಗೆ ನಾಯಿಯನ್ನು ಕೊಂದು ಅದರ ಪುನರ್ಜನ್ಮಕ್ಕಾಗಿ ಪೂಜೆ ಸಲ್ಲಿಸಿದ್ದಾಗಿ ಹೇಳಿದ್ದಾಳೆ ಎನ್ನಲಾಗಿದೆ ಎನ್ನುವ ಮಾಹಿತಿ ಕೂಡಾ ಲಭ್ಯವಾಗಿದೆ. ಈ ಪ್ರಕರಣದ ತನಿಖೆ ನಡೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net