

ರಾಜ್ಕೋಟ್: ಗುಜರಾತ್‌ನ ಭಾವನಗರ ಜಿಲ್ಲೆಯ ಘೋಘಾ ತಾಲೂಕಿನ ಗ್ರಾಮವೊಂದರಲ್ಲಿ ವಧು ವಿನಿಮಯ ಮದುವೆ ವ್ಯವಸ್ಥೆಗೆ(bride swap Arrangement) ಒಪ್ಪದ 22 ವರ್ಷದ ಯುವತಿಯನ್ನು ಆಕೆಯ ತಾಯಿ ಮತ್ತು ಅಣ್ಣ ಕೊಂದು, ಶವವನ್ನು ಖಾಲಿ ಚೆಕ್ ಡ್ಯಾಂನಲ್ಲಿ ಎಸೆದ ಆರೋಪದ ಮೇಲೆ ಬಂಧಿಸಿದ್ದಾರೆ ಎಂದು ಭಾನುವಾರ(ಅ. 26) ವರದಿಯಾಗಿದೆ.
ಮೃತ ಯುವತಿಯನ್ನು ಪಾರುಲ್ ಸರ್ವಿಯಾ ಎಂದು ಗುರುತಿಸಲಾಗಿದೆ. ವಧು ವಿನಿಮಯ ವ್ಯವಸ್ಥೆಯಲ್ಲಿ ಒಪ್ಪಿದ ವ್ಯಕ್ತಿಯೊಂದಿಗೆ ಪಾರುಲ್ಗೆ ಮದುವೆ ಮಾಡಲು ನಿರ್ಧರಿಸಿದ್ದರು ಎನ್ನಲಾಗಿದೆ. ಆದರೆ ಕುಟುಂಬದವರ ಇಚ್ಚೆಯನ್ನು ಧಿಕ್ಕರಿಸಿ ತಾನು ಪ್ರೀತಿಸಿದವನನ್ನೇ ಮದುವೆಯಾಗಲೂ ಹಠ ಹಿಡಿದಿದ್ದರಿಂದ ಆಕೆಯ 65 ವರ್ಷದ ತಾಯಿ ದಯಾ ಮತ್ತು ಸಹೋದರ ಪ್ರಕಾಶ್ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಗುಜರಾತ್‌ನ ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಈ ವಧು ವಿನಿಮಯ ಪದ್ದತೆ ಅನುಸರಿಸಲಾಗುತ್ತಿದೆ ಎನ್ನಲಾಗಿದೆ. ಎರಡು ಕುಟುಂಬಗಳು ತಮ್ಮ ಹೆಣ್ಣುಮಕ್ಕಳನ್ನು ಪರಸ್ಪರರ ಗಂಡು ಮಕ್ಕಳಿಗಾಗಿ ವಧುಗಳಾಗಿ ವಿನಿಮಯ ಮಾಡಿಕೊಳ್ಳಲು ಒಪ್ಪುವ ವಿವಾಹ. ಆರೋಪಿ ಸಹೋದರ ಪ್ರಕಾಶ್ ಮತ್ತು ಪಾರುಲ್ ವಿವಾಹ ಇದೇ ರೀತಿ ನಡೆಸಲು ನಿರ್ಧರಿಸಲಾಗಿತ್ತು.
ಆದರೆ ಇನ್ಸ್ಟಾಗ್ರಾಂನಲ್ಲಿ ಪಾರುಲ್ ತಾನೂ ಪ್ರೀತಿಸುತ್ತಿದ್ದ ಹುಡುಗನೊಂದಿಗೆ ಚಾಟ್ ಮಾಡ್ತಿದ್ದನ್ನು ಅಣ್ಣ ಪ್ರಕಾಶ್ ನೋಡಿದ್ದು, ಅಂದಿನಿಂದ ಪದೇ ಪದೇ ಜಗಳವಾಡುತ್ತಿದ್ದ ಎನ್ನಲಾಗಿದೆ. ಆದಾಗ್ಯೂ ಪಾರುಲ್ ಅವನನ್ನೇ ಮದುವೆಯಾಗುವುದಾಗಿ ಹೇಳಿದ್ದು, ನಿರಾಕರಿಸಿದ್ರೆ ಓಡಿ ಹೋಗುವುದಾಗಿ ಹೇಳಿದ್ದಾಳೆ. ಇದರಿಂದ ಅ. 18ರಂದು ಮತ್ತೊಂದು ಮನೆಯಲ್ಲಿ ಗಲಾಟೆ ನಡೆದಿದ್ದು, ಈ ವೇಳೆ ಪ್ರಕಾಶ್ ಅವಳಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಈ ವೇಳೆ ತಾಯಿ ದಯಾ ಅಲ್ಲೇ ಇದ್ದಳು ಎನ್ನಲಾಗಿದ್ದು, ಬಳಿಕ ಇಬ್ಬರು ಸೇರಿ ಶವವನು ಚೆಕ್ಡ್ಯಾಂನಲ್ಲಿ ಎಸೆದಿದ್ದಾರೆ.
ಇನ್ನು ಪಾರುಲ್ ಕಾಣೆಯಾಗಿರುವ ಬಗ್ಗೆ ಕೇಳಿರುವ ಅವರ ತಂದೆ ಹಿಮಂತ್ ಸರ್ವಿಯಾ ಮುಂದೆ ಚೆಕ್ ಡ್ಯಾಂ ಬಳಿ ಸ್ನಾನ ಮಾಡೋಕೆ ಹೋಗಿದ್ದವಳು ವಾಪಸ್ ಬಂದಿಲ್ಲ ಎಂದು ಹೇಳಿದ್ದಾರೆ. ಮರುದಿನ ದಾರಿಹೋಕರಿಗೆ ಶವದ ವಾಸನೆ ಬಂದಿದ್ದು, ಶವವನ್ನು ಪತ್ತೆ ಮಾಡಿ ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ಬಂದ ಬಳಿಕ ಅದು ಪಾರುಲ್ ಶವ ಎಂದು ಧೃಡಪಡಿಸಿದ್ದಾರೆ. ಬಳಿಕ ತನಿಖೆಯಲ್ಲಿ ಆಕೆಯ ತಾಯಿ ಮತ್ತು ಅಣ್ಣನೆ ಕೊಲೆ ಮಾಡಿರುವುದು ಪತ್ತೆಯಾಗಿದ್ದು ಇಬ್ಬರನ್ನು ಅ. 22ರಂದು ಬಂಧಿಸಿದ್ದಾರೆ.
ವರ್ತೇಜ್ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ ಸೆಕ್ಷನ್ 103(1), 238(ಎ), ಮತ್ತು 54 ರ ಅಡಿಯಲ್ಲಿ ವ ದೂರು ದಾಖಲಾಗಿದೆ. (ಏಜೆನ್ಸೀಸ್)