ಪೊಲೀಸ್​ ಠಾಣೆಗೆ ಕೂಗಳತೆ ದೂರದಲ್ಲಿ ನಿಲ್ಲಿಸಿದ್ದ ಬಸ್​ನೊಳಗೆ ಮಹಿಳೆಗೆ ಲೈಂಗಿಕ ದೌರ್ಜನ್ಯ

Pune Bus
Published on

ಪುಣೆ: ಪೊಲೀಸ್​ ಠಾಣೆಗೆ ಕೂಗಳತೆ ದೂರದಲ್ಲಿ ನಿಲ್ಲಿಸಿದ್ದ ಬಸ್ ಒಂದರಲ್ಲಿ ಮಹಿಳೆ ಮೇಲೆ ವ್ಯಕ್ತಿಯೋರ್ವ ಅತ್ಯಾಚಾರ ಎಸಗಿರುವ ಘಟನೆ ಮಹಾರಾಷ್ಟ್ರದ ಪುಣೆ ನಗರದ  ಸ್ವರ್ಗೇಟ್ ಬಸ್ ನಿಲ್ದಾಣದಲ್ಲಿ ನಡೆದಿದೆ.

ಮಹಿಳೆ ನೀಡಿದ ದೂರನ್ನು ಆಧರಿಸಿ ಪೊಲೀಸರು ಆರೋಪಿ ದತ್ತಾತ್ರೇಯ ರಾಮದಾಸ್ (36) ಎಂಬಾತನಿಗೆ ಶೋಧ ಕಾರ್ಯ ಆರಂಭಿಸಿದ್ದು, ಪೊಲೀಸರು ಈತನನ್ನು ಹುಡುಕಲು 08 ತಂಡಗಳನ್ನು ರಚಿಸಿದ್ದಾರೆ. ಈ ಪ್ರಕರಣ ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ ಕುರಿತಾಗಿ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಘಟನೆ ಕುರಿತು ಮಾಹಿತಿ ನೀಡಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ಸಂತ್ರಸ್ತೆ ಮನೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ಘಟನೆ ನಡೆದಾಗ ಆಕೆ ಮಹಾರಾಷ್ಟ್ರ ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿ ಸತಾರಾ ಜಿಲ್ಲೆಯ ತನ್ನ ತವರು ಗ್ರಾಮವಾದ ಫಾಲ್ತಾನ್‌ಗೆ ತೆರಳಲು ಬಸ್​ಗಾಗಿ ಕಾಯುತ್ತಿದ್ದರು ಎಂದು ತಿಳಿದು ಬಂದಿದೆ. ಘಟನೆಯು ಸಂಜೆ 5:45ರಿಂದ 6:30ರೆ ಸಮಯದಲ್ಲಿ ನಡೆದಿದೆ.

ಸದ್ಯ ಲಭ್ಯವಾಗಿರುವ ಸಿಸಿಟಿವಿ ದೃಶ್ಯವಾಳಿಯಲ್ಲಿ ಆರೋಪಿಯು ಸಂತ್ರಸ್ತೆಯೊಂದಿಗೆ ಮಾತನಾಡುತ್ತಿದ್ದು, ಬಳಿಕ ತನ್ನ ಊರಿಗೆ ತೆರಳುವ ಬಸ್​ ಮತ್ತೊಂದು ಪ್ಲಾಟ್‌ಫಾರ್ಮ್‌ಗೆ ಬಂದಿದೆ ಎಂದು ಹೇಳಿ ಡಿಪೋದಲ್ಲಿ ಹಾಲ್ಟ್ ಮಾಡಲಾಗಿದ್ದ ಬಸ್ ಒಳಗೆ ಕರೆದೊಯ್ದಿದ್ದಾನೆ. ಬಳಿಕ ಆರೋಪಿಯು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದು, ಆರೋಪಿ ತಲೆಮಾರಿಸಿಕೊಂಡಿದ್ದಾನೆ.

ಆರೋಪಿಯ ವಿರುದ್ಧ ಈಗಾಗಲೇ ವಿವಿಧ ಪೊಲೀಸ್​ ಠಾಣೆಗಳಲ್ಲಿ ಕಳ್ಳತನ ಸೇರಿದಂತೆ ವಿವಿಧ ಪ್ರಕರಣಗಳು ದಾಖಲಾಗಿದ್ದು, ಆತನ ಬಂಧನಕ್ಕಾಗಿ ಎಂದು ವಿಶೇಷ ತಂಡಗಳನ್ನು ರಚಿಸಲಾಗಿದೆ. ಸ್ನಿಫರ್ ಘಟಕವನ್ನು ಒಂದನ್ನು ನಿಯೋಜಿಸಲಾಗಿದ್ದು, ಬಸ್ ನಿಲ್ದಾಣದಲ್ಲಿ ನಿಯೋಜಿಸಲಾದ 23 ಭದ್ರತಾ ಸಿಬ್ಬಂದಿಯನ್ನು ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net