

ರಾವಲ್ಪಿಂಡಿ: ಇಲ್ಲಿನ ರಾವಲ್ಪಿಂಡಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಬಾಂಗ್ಲಾದೇಶ ಹಾಗೂ ನ್ಯೂಜಿಲೆಂಡ್ ನಡುವಿನ ಚಾಂಪಿಯನ್ಸ್ ಟ್ರೋಫಿ (Champions Trophy) ಪಂದ್ಯದಲ್ಲಿ ಕಿವೀಸ್ ಪಡೆ ರಚಿನ್ ರವೀಂದ್ರ (112 ರನ್, 105 ಎಸೆತ, 12 ಬೌಂಡರಿ, 1 ಸಿಕ್ಸರ್), ಟಾಮ್ ಲಾಥಮ್ (55 ರನ್, 76 ಎಸೆತ, 3 ಬೌಂಡರಿ) ಉಪಯುಕ್ತ ಕೊಡುಗೆಯ ಫಲವಾಗಿ ಐದು ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು. ಈ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವು ಗೆಲ್ಲುವ ಪಾಕಿಸ್ತಾನ ಹಾಗೂ ಬಾಂಗ್ಲಾದೇಶವನ್ನು ಟೂರ್ನಿಯಿಂದ ಹೊರದಬ್ಬುವ ಮೂಲಕ ಭಾರತದೊಂದಿಗೆ ಸೆಮಿಫೈನಲ್ ಪ್ರವೇಶಿಸಿತು.
ಇನ್ನೂ ಚಾಂಪಿಯನ್ಸ್ ಟ್ರೋಫಿ (Champions Trophy) ಆರಂಭವಾಗುವುದಕ್ಕೂ ಮುಂಚಿನಿಂದಲೂ ಟೂರ್ನಿಗೆ ಉಗ್ರರಿಂದ ಬೆದರಿಕೆ ಇರುವ ಕುರಿತು ವರದಿಗಳು ಪ್ರಕಟವಾಗುತ್ತಿವೆ. ಐಎಸ್‌ಕೆಪಿ ಭಯೋತ್ಪಾದಕ ಗುಂಪು ಚಾಂಪಿಯನ್ಸ್ ಟ್ರೋಫಿಯನ್ನು ವೀಕ್ಷಿಸಲು ಪಾಕಿಸ್ತಾನಕ್ಕೆ ಬಂದಿರುವ ವಿದೇಶಿಗರನ್ನು ಅಪಹರಿಸಲು ಸಂಚು ರೂಪಿಸಿದ್ದಾರೆ ಎಂದು ಪಾಕಿಸ್ತಾನ ಗುಪ್ತಚರ ಇಲಾಖೆ ಮಾಹಿತಿ ನೀಡಿದ ಬೆನ್ನಲ್ಲೇ ನ್ಯೂಜಿಲೆಂಡ್ ಹಾಗೂ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಭಯೋತ್ಪಾದಕನ ಬೆಂಬಲಿಗನೋರ್ವ ಮೈದಾನಕ್ಕೆ ನುಗ್ಗಿರುವ ಘಟನೆ ನಡೆದಿದೆ.
ರಾವಲ್ಪಿಂಡಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿದ್ದ ನ್ಯೂಜಿಲೆಂಡ್-ಬಾಂಗ್ಲಾದೇಶ ನಡುವಿನ ಚಾಂಪಿಯನ್ಸ್ ಟ್ರೋಫಿ (Champions Trophy) ಪಂದ್ಯದ ಸಂದರ್ಭದಲ್ಲಿ ತೆಹ್ರೀಕ್-ಇ-ಲಬ್ಬೈಕ್ ಪಕ್ಷದ ನಾಯಕ ಸಾದ್ ರಿಝ್ವಿಯ ಬೆಂಬಲಿಗನೊಬ್ಬ ಮೈದಾನಕ್ಕೆ ನುಗ್ಗಿ, ನ್ಯೂಜಿಲೆಂಡ್ ಬ್ಯಾಟ್ಸ್‌ಮನ್ ರಚಿನ್ ರವೀಂದ್ರ ಅವರನ್ನು ಅಪ್ಪಿಕೊಂಡ ಘಟನೆ ನಡೆದಿದೆ. ಇದರಿಂದ ರಚಿನ್ ರವೀಂದ್ರ ಭಯಭೀತರಾದರು. ಅಷ್ಟರಲ್ಲಾಗಲೇ ಮೈದಾನಕ್ಕೆ ಆಗಮಿಸಿದ ಭದ್ರತಾ ಸಿಬ್ಬಂದಿಗಳು ಯುವಕನನ್ನು ವಶಕ್ಕೆ ಪಡೆದು, ಕರೆದುಕೊಂಡು ಹೋಗಿದ್ದಾರೆ.
ಮೈದಾನಕ್ಕೆ ಮುಗ್ಗಿದ್ದ ವ್ಯಕ್ತಿ 2021ರಲ್ಲಿ ನಿಷೇಧಿತ ಇಸ್ಲಾಮಿಸ್ಟ್ ಪಕ್ಷ ತೆಹ್ರೀಕ್-ಎ-ಲಬೈಕ್ ಪಾಕಿಸ್ತಾನ್ (ಟಿಎಲ್‌ಪಿ) ಬೆಂಬಲಿಗ ಎಂಬುದು ಗೊತ್ತಾಗಿದೆ. ಈ ವ್ಯಕ್ತಿ ರಚಿನ್ ರವೀಂದ್ರ ಅವರನ್ನು ಹಿಂದಿನಿಂದ ತಬ್ಬಿಕೊಂಡು ಟಿಎಲ್‌ಪಿ ನಾಯಕ ಸಾದ್ ರಿಜ್ವಿ ಚಿತ್ರವನ್ನು ಪ್ರದರ್ಶಿಸಿದ್ದಾನೆ. ಚಾಂಪಿಯನ್ಸ್ ಟ್ರೋಫಿ ವೇಳೆ ಪಾಕಿಸ್ತಾನದಲ್ಲಿ ಭಯೋತ್ಪಾದಕ ಬೆದರಿಕೆಗಳ ವರದಿಗಳ ನಡುವೆ ಈ ಘಟನೆ ನಡೆದಿದ್ದು, ಇದು ಭದ್ರತಾ ವೈಫಲ್ಯದ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಜತೆಗೆ ಪಾಕಿಸ್ತಾನದ ಭದ್ರತಾ ಪಡೆಗಳ ಕಾರ್ಯವೈಖರಿಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕಾಪ್ರಹಾರವೇ ವ್ಯಕ್ತವಾಗುತ್ತಿದೆ.
ಇನ್ನು ಮೈದಾನಕ್ಕೆ ನುಗ್ಗಿದ ಯುವಕನನ್ನು ಬಂಧಿಸಿರುವ ರಾವಲ್ಪಿಂಡಿ ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಅಲ್ಲದೆ ಆತನಿಗೆ ಪಾಕಿಸ್ತಾನದ ಎಲ್ಲಾ ಕ್ರಿಕೆಟ್ ಸ್ಥಳಗಳಿಗೆ ಪ್ರವೇಶಿಸುವುದನ್ನು ಶಾಶ್ವತವಾಗಿ ನಿಷೇಧಿಸಲಾಗಿದೆ. ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ಪಾಕಿಸ್ತಾನದಲ್ಲಿ 29 ವರ್ಷಗಳ ಬಳಿಕ ಐಸಿಸಿ ಟೂರ್ನಮೆಂಟ್ ಒಂದು ನಡೆಯುತ್ತಿದ್ದು, ಭದ್ರತಾ ಲೋಪ ನಡೆದಿರುವುದು ಕೆಂಗಣ್ಣಿಗೆ ಗುರಿಯಾಗಿದೆ. ಅನೇಕರು ಭಾರತ ಇದೇ ಕಾರಣಕ್ಕೆ ಟೂರ್ನಿಯಲ್ಲು ಹೈಬ್ರಿಡ್ ಮಾದರಿಯಲ್ಲಿ ಆಡುತ್ತಿರುವುದು ಇದೇ ಕಾರಣಕ್ಕೆ ಎಂದು ಕಮೆಂಟ್ ಹಾಕಿ ಪಾಕಿಸ್ತಾನದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.