

ನವದೆಹಲಿ: ಸಾಮಾನ್ಯವಾಗಿ ನಾವು ನೋಡಿರುವಂತೆ ಕೆಲಸದ ಸ್ಥಳಗಳಲ್ಲಿ ಇನ್ನೊಬ್ಬರ ಏಳಿಗೆ ಸಹಿಸದೆ ಸುಖಾಸುಮ್ಮನೆ ವಿಷಕಾರುವವರು ಇದ್ದೇ ಇರುತ್ತಾರೆ. ವೈಯಕ್ತಿಕವಾಗಿಯೂ ನಮಗೂ ಅನೇಕ ಬಾರಿ ಈ ರೀತಿಯ ಅನುಭವಗಳು ಆಗಿರುತ್ತವೆ. ಇದೀಗ ಸಹೋದ್ಯೋಗಿ ಒಬ್ಬರಿಗೆ ಬಡ್ತಿ ಸಿಕ್ಕಿದ್ದನ್ನು ಸಹಿಸಲಾರದೆ ಮಹಿಳೆಯೊಬ್ಬರು ಕುಡಿಯುವ ನೀರಿಗೆ ವಿಷ ಬೆರೆಸಿ ಹತ್ಯೆಗೆ ಯತ್ನಿಸಿದ್ದು, ಈ ವಿಚಾರ ವ್ಯಾಪಕ ಖಂಡನೆಗೆ ಗುರಿಯಾಗಿದೆ.
ಘಟನೆಯು ಬ್ರೆಜಿಲ್ನ ಗೋಯಾಸ್ ನಗರದಲ್ಲಿ ನಡೆದಿದ್ದು, ಮಹಿಳೆ ಸಹೋದ್ಯೋಗಿ ಕುಡಿಯುತ್ತಿರುವ ನೀರಿಗೆ ವಿಷ ಬೆರೆಸುತ್ತಿರುವುದು ಕಂಪನಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಈ ವಿಡಿಯೋ ವೈರಲ್ (Video Viral) ಆಗಿದ್ದು, ಮಹಿಳೆಗೆ 6 ರಿಂದ 20 ವರ್ಷಗಳ ಜೈಲು ಶಿಕ್ಷೆಯಾಗುವ ಸಾಧ್ಯತೆ ಇದೆ.
ಆರೋಪಿ ಮಹಿಳೆ ಮತ್ತು ಆಕೆಯ ಸಹೋದ್ಯೋಗಿ ಇಬ್ಬರು ಉತ್ತಮ ಸ್ನೇಹಿತರಾಗಿದ್ದು, ಇಬ್ಬರ ಪೈಕಿ ಕಂಪನಿಯ ಮುಖ್ಯಸ್ಥರು ಬಡ್ತಿ ನೀಡಿ ಈ ವಿಚಾರವನ್ನು ಕಂಪನಿಯಲ್ಲಿ ಘೋಷಿಸಿದ್ದರು. ಇದರಿಂದ ಸಿಟ್ಟಿಗೆದ್ದ ಆರೋಪಿ ಸಂತ್ರಸ್ತೆ ಕುಡಿಯುವ ನೀರಿಗೆ ವಿಷವನ್ನು ಬೆರೆಸಿದ್ದು, ಕಂಪನಿಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸಂಪೂರ್ಣ ಕೃತ್ಯ ಸೆರೆಯಾಗಿದೆ. ಸಂತ್ರಸ್ತ ಮಹಿಳೆ ನೀರನ್ನು ಕುಡಿದ ಕೆಲಕ್ಷಣದ ಬಳಿಕ ಆಕೆಗೆ ಬಾಯಿ ಉರಿಯಲು ಶುರುವಾಗಿದ್ದು, ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸೂಕ್ತ ಚಿಕಿತ್ಸೆಯ ಫಲವಾಗಿ ಮಹಿಳೆಯ ಜೀವ ಉಳಿದಿದ್ದು, ಘಟನೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾದ ನಂತರ ಆರೋಪಿ ಮಹಿಳೆಯನ್ನು ಕೊಲೆ ಯತ್ನ ಆರೋಪದಡಿ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ವಿಚಾರಣೆಯಲ್ಲಿ ಆರೋಪಿ ತಪ್ಪೊಪ್ಪಿಕೊಂಡಿದ್ದು, 6ರಿಂದ 20 ವರ್ಷ ಜೈಲು ಶಿಕ್ಷೆಯಾಗುವ ಸಾಧ್ಯತೆ ಇದೆ ಎಂದು ಅಲ್ಲಿನ ಪೊಲೀಸ್ ಅಧಿಕಾರಿಗಳು ತಿಳಿಸಿದ್ದು, ಶೀಘ್ರದಲ್ಲೇ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ತಿಳಿಸಿದ್ದಾರೆ.