ಶ್ರೀ ಸಿದ್ದೇಶ್ವರ ಸ್ವಾಮೀಜಿ ಬೇಗನೆ ಗುಣಮುಖರಾಗಲಿ ಎಂದು 80 ಕಿ.ಮೀ ದೀರ್ಘದಂಡ ನಮಸ್ಕಾರದ ಹರಕೆ ಹೊತ್ತ ಭಕ್ತೆ..!

harake
Published on

ವಿಜಯಪುರ: ಸಿದ್ದೇಶ್ವರ ಶ್ರೀಗಳ ಬಗ್ಗೆ ಅನೇಕ ರೀತಿಯ ಸುಳ್ಳು ಸುದ್ದಿಗಳು ಹರಿದಾಡಲು ಶುರುವಾದ ಮೇಲೆ ಶಾಸಕ ಯತ್ನಾಳ್​ ಸ್ವಾಮೀಜಿಯನ್ನು ಭೇಟಿ ಮಾಡಿ ನಿನ್ನೆ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದರು. ಇದೀಗ ಸಿದ್ದೇಶ್ವರ ಶ್ರೀಗಳ ಆರೋಗ್ಯ ಸುಧಾರಿಸಲು ಭಕ್ತರು ವಿಶೇಷ ಹರಕೆಗಳನ್ನು ಹೊತ್ತುಕೊಳ್ಳುತ್ತಿದ್ದಾರೆ.‘

ಇದೀಗ ಮಹಿಳೆಯೊಬ್ಬರು ಸ್ವಾಮೀಜಿ ಆರೋಗ್ಯ ಸುಧಾರಿಸಲು 80 ಕಿಲೋಮೀಟರ್ ಧೀರ್ಘದಂಡ ನಮಸ್ಕಾರ ಹಾಕುವ ಹರಕೆ ಹೊತ್ತುಕೊಂಡಿದ್ದಾರೆ. ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದ ಭಕ್ತೆ ಕಸ್ತೂರಿ ಬಾಲಗೊಂಡ ಎಂಬ ಮಹಿಳೆ ದೀರ್ಘದಂಡ ನಮಸ್ಕಾರ ಹಾಕುವ ಹರಕೆ ಹೊತ್ತಿದ್ದಾರೆ.

ಈ ಮಹಿಳೆ ಕೊಲ್ಹಾರ ಪಟ್ಟಣದಿಂದ ನೆರೆಯ ಬಾಗಲಕೋಟೆ ಜಿಲ್ಲೆಯ ಸುಕ್ಷೇತ್ರ ಬಾದಾಮಿ ಬನಶಂಕರಿದೇವಿ ದೇವಸ್ಥಾನದವರೆಗೂ ದೀರ್ಘದಂಡ ನಮಸ್ಕಾರ ಹಾಕುವ ಹರಕೆ ಹೊತ್ತುಕೊಂಡಿದ್ದಾರೆ. ನಡೆದಾಡುವ ದೇವರು ಸಿದ್ದೇಶ್ವರ ಪೂಜ್ಯರು ಶೀಘ್ರ ಗುಣಮುಖರಾಗಲೆಂದು ಸಂಕಲ್ಪಿಸಿ ಈ ಭಕ್ತೆ ಕಠಿಣವಾದ ದೀರ್ಘದಂಡ ನಮಸ್ಕಾರ ಹರಕೆಯನ್ನು ಹೊತ್ತುಕೊಂಡಿದ್ದಾರೆ.

ಇಂದು (ಸೋಮವಾರ) ಬೆಳಗ್ಗೆ ನಸುಕಿನ ವೇಳೆ ಸೇವೆ ಆರಂಭಿಸಿರುವ ಭಕ್ತೆ ಸದ್ಯ ಬೀಳಗಿ ಕ್ರಾಸ್ ದಾಟಿದ್ದಾರೆ. ದೀರ್ಘದಂಡ ಸೇವೆ ಹಾಕುತ್ತಾ ಗುರುವಾರ ಭಕ್ತೆ ಕಸ್ತೂರಿ ಬಾಲಗೊಂಡ ಬನಶಂಕರಿದೇವಿ ದೇವಸ್ಥಾನ ತಲುಪಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net