ದೊಡ್ಡವರ ಜಗಳದಲ್ಲಿ ಕೂಸು ಬಲಿಯಾಯ್ತು... ಸುಳ್ಳು ಕೇಸ್ ಹಾಕಲು ಮೊಮ್ಮಗಳನ್ನು ಕೊಂದ ಕಿರಾತಕಿ!

child
Published on

ಜೈಪುರ : ಎರಡು ಗುಂಪುಗಳ ನಡುವೆ ಜಗಳ ನಡೆದ ಹಿನ್ನೆಲೆಯಲ್ಲಿ ಎದುರಾಳಿಯ ಮೇಲೆ ಸುಳ್ಳು ಕೇಸು ಹಾಕಿ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಮಹಿಳೆಯೊಬ್ಬಳು ತನ್ನ 3 ವರ್ಷದ ಮೊಮ್ಮಗಳನ್ನು ಕೊಂದಿರುವ ಆಘಾತಕಾರಿ ಪ್ರಸಂಗ ವರದಿಯಾಗಿದೆ. ರಾಜಸ್ಥಾನದ ಬಾರನ್​ ಜಿಲ್ಲೆಯ ಬೊರಿನಾ ಗ್ರಾಮದ ನಿವಾಸಿ 50 ವರ್ಷದ ಕನಕ್​ಬಾಯಿ ಎಂಬಾಕೆ ಈ ಹೇಯ ಕೃತ್ಯ ಎಸಗಿರುವ ಆರೋಪಿ.

ಕನಕ್​ಬಾಯಿಯ ಮಗ ಅಮರ್​ಲಾಲ್ ಮೋಗ್ಯ ಮತ್ತು ಅದೇ ಗ್ರಾಮದ ನಿವಾಸಿ ರಾಮೇಶ್ವರ್ ಮೋಗ್ಯ ಬಣಗಳ ನಡುವೆ ಮೇ 30 ರಂದು ನೀರು ಹಿಡಿಯುವ ದಾರಿಯ ಬಗ್ಗೆ ದೊಡ್ಡ ಜಗಳ ನಡೆದಿತ್ತು. ಈ ಜಗಳದಲ್ಲಿ ಹಲವರಿಗೆ ಗಾಯಗಳಾಗಿದ್ದು, ಅಮರ್​ಲಾಲ್​ ಮೋಗ್ಯರ 3 ವರ್ಷದ ಮಗಳು ಸಾವಪ್ಪಿದ್ದಳು ಎಂದು ಕನಕ್​ಬಾಯಿ ಕುಟುಂಬದವರು ರಾಮೇಶ್ವರ್​ ಮೋಗ್ಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು.

ತನಿಖೆ ಕೈಗೊಂಡ ಪೊಲೀಸರಿಗೆ ತಿಳಿದುಬಂದ ವಿಷಯವೆಂದರೆ, ಅಂದಿನ ಜಗಳದಲ್ಲಿ ರಾಮೇಶ್ವರ್ ಮೋಗ್ಯ ಮಗಳಿಗೂ ಏಟು ಬಿದ್ದಿದ್ದು, ಕನಕ್​ಬಾಯಿ ಆತನ ವಿರುದ್ಧ ಪೊಲೀಸರಿಗೆ ದೂರು ಸಲ್ಲಿಸುವುದಾಗಿ ಹೆದರಿಸಿದಾಗ ಆತ ಸ್ಥಳದಿಂದ ಓಡಿಹೋಗಿದ್ದ. ತದನಂತರ, ಜಗಳದಲ್ಲಿ ರಾಮೇಶ್ವರ್​ ಮೋಗ್ಯನೇ ಮಗುವನ್ನು ಸಾಯಿಸಿದ ಎಂದು ಸುಳ್ಳು ಆರೋಪ ಹೊರಿಸುವುದಕ್ಕಾಗಿ, ಕನಕ್​ಬಾಯಿ ಮೊಮ್ಮಗುವನ್ನು ಸಾಯಿಸಿದ್ದಳು. ಆರೋಪಿಯ ಅನುಮಾನಾಸ್ಪದ ವರ್ತನೆ ಗಮನಿಸಿ ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದ್ದು, ಆಕೆಯನ್ನು ಬಂಧಿಸಲಾಗಿದೆ ಎಂದು ಬಾರನ್ ಎಸ್ಪಿ ವಿನೀತ್​ಕುಮಾರ್​ ಬನ್ಸಲ್ ಹೇಳಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net