ಹಾಡುಹಗಲೇ ಬ್ಯಾಂಕ್ ದರೋಡೆ : 1.19 ಕೋಟಿ ರೂ. ಹಣ ಲೂಟಿ

bank
Published on

ಪಟ್ನ : ಸಿನಿಮೀಯ ಮಾದರಿಯಲ್ಲಿ ಗನ್​ಗಳನ್ನು ಹಿಡಿದ ದರೋಡೆಕೋರರು ಬ್ಯಾಂಕಿಗೆ ಲಗ್ಗೆ ಇಟ್ಟು, 1.19 ಕೋಟಿ ರೂಪಾಯಿ ಹಣ ದೋಚಿರುವ ಪ್ರಕರಣ ಬಿಹಾರದಿಂದ ವರದಿಯಾಗಿದೆ. ಕೇಂದ್ರದ ಗೃಹ ಖಾತೆಯ ರಾಜ್ಯ ಸಚಿವ ನಿತ್ಯಾನಂದ ರೈ ಅವರ ನಿವಾಸದ ಬಳಿಯಲ್ಲೇ ಈ ಘಟನೆ ನಡೆದಿರುವುದು ವಿಪರ್ಯಾಸ.

ಬಿಹಾರದ ಹಾಜಿಪುರದಲ್ಲಿನ ಎಚ್​ಡಿಎಫ್​ಸಿ ಬ್ಯಾಂಕ್​​ನ ಜಾದುಹ ಶಾಖೆಯಲ್ಲಿ ಈ ದರೋಡೆ ನಡೆದಿದೆ. ಬೆಳಿಗ್ಗೆ ಶಾಖೆಯು ಸಾರ್ವಜನಿಕರ ಸೇವೆಗೆ ತೆರೆದ ಸ್ವಲ್ಪ ಸಮಯದಲ್ಲೇ 5 ಜನ ಬೈಕ್​ಗಳಲ್ಲಿ ಬಂದು, ಬ್ಯಾಂಕಿಗೆ ನುಗ್ಗಿದರು. ಸಿಬ್ಬಂದಿಯನ್ನು ಬೆದರಿಸಿ ಕ್ಯಾಶ್​ ರೂಮಿನಿಂದ ಹಣವನ್ನು ತರಿಸಿಕೊಂಡು ಸುಮಾರು 1.19 ಕೋಟಿ ರೂಪಾಯಿಗಳನ್ನು ಮೂಟೆಗಳಿಗೆ ತುಂಬಿಸಿಕೊಂಡು ಪಲಾಯನ ಮಾಡಿದರು ಎನ್ನಲಾಗಿದೆ.

ಹಣದ ಮೂಟೆಗಳನ್ನು ತಮ್ಮ ಭುಜದ ಮೇಲೆ ಎತ್ತಿಕೊಂಡು ಬ್ಯಾಂಕ್​ನಿಂದ ಹೊರಹೋಗುವ ಸಮಯದಲ್ಲಿ ಈ ಖದೀಮರ ಮುಖಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಈ ಐವರನ್ನು ಗುರುತಿಸುವುದಕ್ಕಾಗಿ ಸಿಸಿಟಿವಿ ಫೂಟೇಜನ್ನು ಪರಿಶೀಲಿಸಲಾಗುತ್ತಿದೆ. ಬಾರ್ಡರ್​ ಸೀಲ್ ಮಾಡಲಾಗಿದ್ದು, ಪತ್ತೆ ಕಾರ್ಯ ಆರಂಭವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net