ಕಷ್ಟ ಎಂದು ಕಿಡ್ನಿ ಮಾರಲಿಕ್ಕೆ ಮುಂದಾದ ಮಹಿಳೆಗೇ ಮೋಸ ಮಾಡಿದ್ರು; ನಯವಾಗೇ 7.97 ಲಕ್ಷ ರೂ. ಪಡೆದ ಸೈಬರ್ ವಂಚಕರು

Kidney
Published on

ಬೆಂಗಳೂರು: ಕಿಡ್ನಿ ಕೊಟ್ಟರೆ ಒಂದು ಕೋಟಿ ರೂಪಾಯಿ ಕೊಡುವುದಾಗಿ ಮಹಿಳೆಗೆ ಆಮಿಷವೊಡ್ಡಿದ ಸೈಬರ್ ಕಳ್ಳರು, ಆಕೆಯಿಂದ 7.97 ಲಕ್ಷ ರೂ. ಪಡೆದು ವಂಚನೆ ಮಾಡಿದ್ದಾರೆ. ವೈಯಾಲಿಕಾವಲ್‌ನ 36 ವರ್ಷದ ಮಹಿಳೆ ವಂಚನೆಗೆ ಒಳಗಾದವರು.

ಸಾಮಾಜಿಕ ಜಾಲತಾಣದಲ್ಲಿ ಕಿಡ್ನಿ ಮಾರಾಟದ ಬಗ್ಗೆ ಜಾಹೀರಾತು ನೋಡಿದ ಮಹಿಳೆ, ಅದರಲ್ಲಿನ ಮೊಬೈಲ್​ಫೋನ್​ ನಂಬರ್‌ಗೆ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸಿದಾಕೆ ಡಾ.ಸೀಮಾ ರೈ ಎಂದು ಪರಿಚಯ ಮಾಡಿಕೊಂಡು, ಕಿಡ್ನಿ ಹೊಂದಾಣಿಕೆಯಾದರೆ 1 ಕೋಟಿ ರೂ. ಕೊಡುವುದಾಗಿ ಭರವಸೆ ನೀಡಿದ್ದಾರೆ. ಆನಂತರ ನೋಂದಣಿ ಮಾಡಿಕೊಳ್ಳಲು 6,999 ರೂ. ಪಾವತಿ ಮಾಡಬೇಕೆಂದು ಆನ್‌ಲೈನ್‌ನಲ್ಲಿ ವರ್ಗಾವಣೆ ಮಾಡಿಕೊಂಡಿದ್ದಾರೆ.

ಇದಾದ ಮೇಲೆ ರಕ್ತ ಪರೀಕ್ಷೆ, ಆರ್‌ಬಿಐ ಮಾರ್ಗಸೂಚಿ ಶುಲ್ಕವೆಂದು ನಾನಾ ನೆಪದಲ್ಲಿ ಮಹಿಳೆಯಿಂದ 7.97 ಲಕ್ಷ ರೂ. ವರ್ಗಾವಣೆ ಮಾಡಿಕೊಂಡಿದ್ದಾರೆ. ಕಷ್ಟದಲ್ಲಿದ್ದ ಮಹಿಳೆ 1 ಕೋಟಿ ರೂ. ಬರುವ ಆಸೆಯಿಂದ ಕಿಡ್ನಿ ಮಾರಾಟಕ್ಕೂ ನಿರ್ಧರಿಸಿದ್ದರು. ಆದರೆ, ಸೈಬರ್ ವಂಚಕಿ, ಸಬೂಬು ಹೇಳಿ ಹಣ ಸುಲಿಗೆ ಮಾಡಿ ಮೋಸ ಮಾಡಿದ್ದಾರೆ. ನೊಂದ ಮಹಿಳೆ ನೀಡಿದ ದೂರಿನ ಮೇರೆಗೆ ಕೇಂದ್ರ ವಿಭಾಗ ಸಿಇಎನ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net