ಶ್ರಮಜೀವಿ ಎಕ್ಸ್​ಪ್ರೆಸ್​ ರೈಲಿನ ಶೌಚಾಲಯದಲ್ಲಿ ಯುವತಿಯ ಮೃತದೇಹ ಪತ್ತೆ

Shramajeevi Express
Published on

ಪಟ್ನಾ: ಬಿಹಾರದ ರಾಜ್​ಗಿರ್​ ಹಾಗೂ ನವದೆಹಲಿ ನಡುವೆ ಸಂಚರಿಸುವ ಶ್ರಮಜೀವಿ ಎಕ್ಸ್​ಪ್ರೆಸ್​ ರೈಲಿನ ಶೌಚಾಲಯದಲ್ಲಿ ಯುವತಿಯೊಬ್ಬಳ ಮೃತದೇಹ ಪತ್ತೆಯಾಗಿದೆ.

ರೈಲು ರಾಜ್​ಗಿರ್​ ನಿಲ್ದಾಣಕ್ಕೆ ಶನಿವಾರ ಬೆಳಗ್ಗೆ 10:30ರ ಸುಮಾರಿಗೆ ಆಗಮಿಸಿದ್ದು, ಸ್ವಚ್ಛತಾ ಸಿಬ್ಬಂದಿ ರೈಲು ಬೋಗಿಯ ಶೌಚಾಯಲದ ಬಾಗಿಲು ತೆರೆದಾಗ 25 ವರ್ಷದ ಯುವತಿಯೊಬ್ಬಳ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸ್​ ಅಧಿಕಾರಿಗಳು ಯುವತಿಯ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಸ್ಥಳೀಯ ಪೊಲೀಸ್​ ಅಧಿಕಾರಿಯೊಬ್ಬರು ಮೊದಲಿಗೆ ಇದು ಆತ್ಮಹತ್ಯೆ ಎಂದು ಭಾವಿಸಿದ್ದೆವು. ಆದರೆ, ಆ ನಂತರ ಪರಿಶೀಲಿಸಿದಾಗ ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಪ್ರಕರಣ ಸಂಬಂಧ ಮಾಹಿತಿ ಕಲೆ ಹಾಕಲಾಗುತ್ತಿದ್ದು, ಅಧಿಕಾರಿಗಳು ಸಿಸಿಟಿವಿ ದೃಶ್ಯಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.

ಮೃತ ಯುವತಿಯೂ ಸುಮಾರು 25 ವರ್ಷ ವಯಸ್ಸಿನವರಾಗಿದ್ದು, ಆಕೆಯ ಗುರುತು ಇನ್ನು ಪತ್ತೆಯಾಗಿಲ್ಲ. ಪ್ರಸ್ತುತ ತನಿಖೆ ನಡೆಯುತ್ತಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಅದರ ವರದಿ ಆಧರಿಸಿ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಸ್ಥಳೀಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net