ಕತ್ತೆ ಕಿರುಬಗಳ ವಿರುದ್ಧ ಏಕಾಂಗಿಯಾಗಿ ಹೋರಾಡಿ ಗಂಡನ ಜೀವ ಉಳಿಸಿದ ಪತ್ನಿ!

Hyenas Attack
Published on

ನವದೆಹಲಿ: ದಿಟ್ಟ ಮಹಿಳೆಯೊಬ್ಬಳು ಕತ್ತೆ ಕಿರುಬಗಳ ಹಿಂಡಿನ ವಿರುದ್ಧ ಹೋರಾಡಿ ತನ್ನ ಗಂಡನನ್ನು ಕಾಪಾಡಿಕೊಂಡಿರುವ ರೋಚಕ ಘಟನೆ ಛತ್ತೀಸ್​ಗಢದ ಕೊಂಡಗಾಂವ್ ಜಿಲ್ಲೆಯಲ್ಲಿ ನಡೆದಿದೆ.

ನಂದು ಯಾದವ್ ಎಂಬುವರು ಸೋಮವಾರ ಸಂಜೆ 5 ಗಂಟೆಗೆ ಜಮೀನಿಗೆ ನೀರು ಹಾಯಿಸಲು ಹೋಗಿದ್ದ ವೇಳೆ ಹೈನಾಗಳು ಸುತ್ತುವರಿದು ದಾಳಿ ನಡೆಸಿವೆ. ಸಹಾಯಕ್ಕಾಗಿ ಆತ ಕೂಗಿಕೊಂಡಿದ್ದನ್ನು ಕೇಳಿಸಿಕೊಂಡ ಪತ್ನಿ ಸುಗ್ನಿ, ಘಟನಾ ಸ್ಥಳಕ್ಕೆ ಓಡಿ ಬಂದು ಗಂಡನನ್ನು ಎಳೆದುಕೊಳ್ಳಲು ಪ್ರಯತ್ನಿಸಿದಳು. ಆದರೆ, ಹೈನಾಗಳು ದಾಳಿ ಮಾಡಲು ಮುಂದುವರಿಸಿದಾಗ ಅದೃಷ್ಟವಶಾತ್​ ಅಲ್ಲಿಯೇ ಇದ್ದ ದೊಡ್ಡ ಬಡಿಗೆಯನ್ನು ಕಂಡ ಸುಗ್ನಿ, ಬಡಿಗೆ ತೆಗೆದುಕೊಂಡು ಒಂದು ಹೈನಾ ತಲೆಗೆ ಬಲವಾಗಿ ಬಡಿದಿದ್ದಾಳೆ.

ಸುಗ್ನಿ ಬಡಿದ ರಭಸಕ್ಕೆ ಹೈನಾ ಸ್ಥಳದಲ್ಲೇ ಸತ್ತು ಬಿದ್ದಿದೆ. ಇದನ್ನು ನೋಡಿದ ಉಳಿದ ಹೈನಾಗಳು ಅಲ್ಲಿಂದ ಪರಾರಿಯಾದವು. ನಂದು ಯಾದವ್​ ಕೈ ಕಾಲುಗಳು ಮತ್ತು ನಡುವಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅರಣ್ಯ ಇಲಾಖೆ ಅಧಿಕಾರಿಗಳು ಸತ್ತ ಹೈನಾವನ್ನು ತೆಗೆದುಕೊಂಡು ಹೋಗಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಅದನ್ನು ಹೂತು ಹಾಕಿದರು. ನಂದು ಅಪಾಯದಿಂದ ಪಾರಾಗಿರುವುದಾಗಿ ಎಂದು ವೈದ್ಯರು ತಿಳಿಸಿದ್ದಾರೆ. ನಂದು ಮತ್ತು ಸುಗ್ನಿ ಕೆಲವು ತಿಂಗಳ ಹಿಂದಷ್ಟೇ ತಂದೆ-ತಾಯಿಯಾಗಿ ಬಡ್ತಿ ಪಡೆದಿದ್ದಾರೆ. ಪತ್ನಿ ಸುಗ್ನಿಯ ಶೌರ್ಯವನ್ನು ಕಂಡು ಗ್ರಾಮಸ್ಥರು ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net