VIDEO| ಮಗನ ವಿರುದ್ಧ ಎಫ್​ಐಆರ್​ ದಾಖಲಿಸಲು ಪೊಲೀಸರ ಮೇಲೆ 500 ರೂ. ನೋಟುಗಳನ್ನು ಎಸೆದ ತಾಯಿ

Viral Video
Published on

ಭೋಪಾಲ್​: ಘಟನೆ ಒಂದರಲ್ಲಿ ಮಹಿಳೆ ಒಬ್ಬರು ಪೊಲೀಸ್​ ಠಾಣೆ ಎದುರು ತಮ್ಮ ಕಾರನ್ನು ನಿಲ್ಲಿಸಿ ಅಧಿಕಾರಿಗಳ ಮೇಲೆ 500 ರೂ. ಮುಖಬೆಲೆಯ ನೋಟುಗಳನ್ನು ಎಸೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಘಟನೆಯೂ ಮಧ್ಯಪ್ರದೇಶದ ನೀಮುಚ್​ ಜಿಲ್ಲೆಯ ಕ್ಯಾಂಟ್​​ ಪೊಲೀಸ್​ ಠಾಣೆ ಎದುರು ನಡೆದಿದ್ದು, ಮಹಿಳೆ ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್​ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ದೂಷಿಸುತ್ತಿರುವುದು ಕಂಡು ಬರುತ್ತದೆ.

ಘಟನೆಯ ಹಿನ್ನಲೆ?

ಶಾಂತಿ ಭಾಯಿ ಎಂಬ ಮಹಿಳೆಯೂ ತನ್ನ ಮಗ ಆಶಿಶ್​ ಲೋಟ್​ ಪ್ರತಿ ನಿತ್ಯ ಮನಬಂದಂತೆ ಥಳಿಸುತ್ತಿದ್ದಾನೆ. ಈ ಕುರಿತು ಹಲವು ಬಾರಿ ನೀಮುಚ್​ ಕ್ಯಾಂಟ್​ ಪೊಲೀಸ್​ ಠಾಣೆಗೆ ದೂರು ನೀಡಿದ್ದರು ಅಧಿಕಾರಿಗಳು ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎಂದು ಮಹಿಳೆ ದೂರಿದ್ದಾರೆ.

ನಾನು ಪ್ರತಿ ಬಾರಿಯೂ ನನ್ನ ಮಗನ ವಿರುದ್ಧ ಕ್ರಮಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಿದ್ದರು ಅವರು ಹಣಕ್ಕಾಗಿ ಬೇಡಿಕೆ ಇಡುತ್ತಿದ್ದರು. ಅದಕ್ಕಾಗಿಯೇ 500 ರೂ. ಮುಖಬೆಲೆಯ ನೋಟಿನ ಬಂಡಲ್​ ತಂದು ಠಾಣೆಯ ಮುಂಭಾಗ ಎಸೆದಿದ್ದೇನೆ ಎಂದು ಮಹಿಳೆ ಹೇಳುತ್ತಿರುವುದು ಕಂಡು ಬರುತ್ತದೆ.

ನಿವೃತ್ತ ಎನ್​ಸಿಸಿ ಅಧಿಕಾರಿಯಾಗಿರುವ ಶಾಂತಿ ಭಾಯಿ ಮಧ್ಯಪ್ರದೇಶ ಸರ್ಕಾರ ಹಾಗೂ ಪೊಲೀಸರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಮಹಿಳೆಯರಿಗಾಗಿ ಜಾರಿಗೆ ತಂದಿರುವ ಲಾಡ್ಲಿ ಬೆಹ್ನಾ ಯೋಜನೆಯನ್ನು ಕಟುವಾಗಿ ಟೀಕಿಸಿತ್ತಿರುವುದು ಸಹ ವಿಡಿಯೋದಲ್ಲಿ ಕಂಡು ಬಂದಿದೆ.

ಪ್ರಕರಣ ನ್ಯಾಯಾಲಯದಲ್ಲಿದೆ

ಘಟನೆಯ ಕುರಿತು ಪ್ರತಿಕ್ರಿಯಿಸಿರುವ ನೀಮುಚ್​ ಕ್ಯಾಂಟ್​ ಪೊಲೀಸ್​ ಠಾಣೆಯ ಹೆಡ್​ ಕಾನ್ಸ್​ಟೇಬಲ್​ ಸುರೇಂದ್ರ ಸಿಂಗ್​ ಶಾಂತಿ ಭಾಯಿ ಹಾಗೂ ಡ್ಯಾನ್ಸ್​ ಮಾಸ್ಟರ್​ ಆಗಿ ಕೆಲಸ ಮಾಡುತ್ತಿರುವ ಆಕೆಯ ಪುತ್ರ ಆಶಿಶ್​ ನಡುವೆ ಕಳೆದ ಆರು ತಿಂಗಳಿನಿಂದ ಹಣಕಾಸು ವಿಚಾರವಾಗಿ ತಗಾದೆ ನಡೆಯುತ್ತಿದೆ.

ಮಹಿಳೆಯೂ ಆಕೆಯ ಪುತ್ರನ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು ಅದರ ವಿಚಾರಣೆ ನಡೆಯುತ್ತಿದೆ. ಹಾಗಿದ್ದರೂ ಅವರು ಪೊಲೀಸ್​ ಠಾಣೆಯಲ್ಲಿ ಹಲ್ಲೆ ಸಂಬಂಧ ದೂರು ದಾಖಲಿಸಿದ್ದು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net