

ನವದೆಹಲಿ: ರೈಲು ನಿಲ್ದಾಣದಲ್ಲಿ ಮಳೆ ನೀರು ನಿಂತಿದ್ದರಿಂದ ವಿದ್ಯುತ್ ಸ್ಪರ್ಶಿಸಿ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ನವದೆಹಲಿ ರೈಲು ನಿಲ್ದಾಣದಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ದೆಹಲಿಯ ಪ್ರೀತ್ ವಿಹಾರ್ ನಿವಾಸಿ ಸಾಕ್ಷಿ ಅಹುಜಾ ಎಂದು ಗುರುತಿಸಲಾಗಿದೆ. ನವದೆಹಲಿ ರೈಲು ನಿಲ್ದಾಣದ ಆವರಣದಲ್ಲಿ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದಾರೆ. ಎಫ್‌ಎಸ್‌ಎಲ್ ತಂಡ ಸ್ಥಳದಲ್ಲಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಸಾಕ್ಷಿ ಅಹುಜಾ ಅವರು, ಭೋಪಾಲ್ ರೈಲ್ನಲ್ಲಿ ಪ್ರಯಾಣಿಸಲು ಇಲ್ಲಿಗೆ ಬಂದಿದ್ದಾಳೆ. ಮಳೆಯಿಂದಾಗಿ ರೈಲ್ವೆ ನಿಲ್ದಾಣದ ಹೊರಗೆ ಜಲಾವೃತವಾಗಿದೆ. ನೀರಿನಲ್ಲಿ ಹೋಗುವುದನ್ನು ತಪ್ಪಿಸಲು ಕಂಬವನ್ನು ಹಿಡಿದಿದ್ದಾರೆ. ಈ ವೇಳೆ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಅಧಿಕಾರಿಗಳ ನಿರ್ಲಕ್ಷ್ಯಕ್ಕಾಗಿ ದೂರನ್ನು ದಾಖಲಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಇದೇ ವೇಳೆ ಮೃತ ಮಹಿಳೆಯ ತಂದೆ ಲೋಕೇಶ್ ಕುಮಾರ್ ಚೋಪ್ರಾ ಮಾತನಾಡಿ, ‘ನಾವು ಚಂಡೀಗಢಕ್ಕೆ ಹೋಗುತ್ತಿದ್ದೆವು, ವಾಹನ ನಿಲುಗಡೆ ಪ್ರದೇಶದಲ್ಲಿದ್ದ ನನ್ನ ಮಗಳು ಸಾಕ್ಷಿ ಅಹುಜಾ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದಾಳೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ ಎಂದು ಹೇಳಿದ್ದಾರೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಈ ಅಪಘಾತದಲ್ಲಿ ಸಾಕ್ಷಿ ಅವರ ಇಬ್ಬರು ಮಕ್ಕಳು ಅನಾಥರಾಗಿದ್ದಾರೆ.