

ಸೂರತ್: ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ಆರೋಪದ ಮೇಲೆ ಸೋಶಿಯಲ್ ಮೀಡಿಯಾ ಪ್ರಭಾವಿ ಯುವತಿಯನ್ನು ಗುಜರಾತಿನ ಸೂರತ್ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಯುವತಿ ಒಂದು ಲಕ್ಷಕ್ಕೂ ಅಧಿಕ ಫಾಲೋವರ್ಸ್ ಇರುವ ತನ್ನ ಇನ್ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದರು. ಅದರಲ್ಲಿ ಮಾಸ್ಕ್ ಮತ್ತು ಹೆಲ್ಮೆಟ್ ಧರಿಸದೇ ಬೈಕ್ ರೈಡ್ ಮಾಡಿದ್ದಳು. ಈ ವಿಡಿಯೋ ಸೂರತ್ ಪೊಲೀಸರ ಗಮನಕ್ಕೆ ಬಂದ ತಕ್ಷಣ ಯುವತಿಯನ್ನು ಬಂಧಿಸಲಾಗಿದೆ.
ವಿಡಿಯೋದ ಗಂಭೀರತೆ ಅರಿತು ಯುವತಿಯನ್ನು ಬಂಧಿಸಿರುವುದಾಗಿ ಸೂರತ್ ಪೊಲೀಸರು ತಿಳಿಸಿದ್ದಾರೆ. ಇಂತಹ ಅನೇಕ ವಿಡಿಯೋಗಳು ವೈರಲ್ ಆಗಿದ್ದು, ಅದರಲ್ಲಿ ಆಕೆ ಯಾವುದೇ ಸುರಕ್ಷತಾ ಕ್ರಮಗಳನ್ನು ಅನುಸರಿಸದೇ ಅತಿವೇಗದ ಚಾಲನೆ ಮಾಡಿರುವುದು ಬೆಳಕಿಗೆ ಬಂದಿದೆ.
ಇಂತಹ ನಡವಳಿಕೆಗಳಿಗೆ ಹೆಚ್ಚು ಅಪಘಾತಗಳು ಸಂಭವಿಸುತ್ತವೆ. ಜಾಲತಾಣದಲ್ಲಿ ಲೈಕ್ಸ್ ಮತ್ತು ಶೇರ್ ಗಿಟ್ಟಿಸಿಕೊಳ್ಳಲು ಜೀವದ ಜತೆ ಚೆಲ್ಲಾಟ ಆಡುವುದು ಅರಿಯಲ್ಲ. ಇಂತಹ ಘಟನೆಗಳು ಮರುಕಳಿಸಿದರೆ ಕಠಿಣ ಶಿಕ್ಷೆಗೆ ಗುರಿಯಾಗುತ್ತೀರಿ ಎಂದು ಸೂರತ್ ಪೊಲೀಸರು ಎಚ್ಚರಿಸಿದ್ದಾರೆ. (ಏಜೆನ್ಸೀಸ್)