

ಹೈದರಾಬಾದ್: ಲವ್ ರೆಡ್ಡಿ('Love reddy') ಚಿತ್ರದ ಪ್ರಮೋಷನ್ ಅಂಗವಾಗಿ ಥಿಯೇಟರ್ ಗೆ ತೆರಳಿದ ಚಿತ್ರತಂಡಕ್ಕೆ ಕಹಿ ಅನುಭವವಾಗಿದೆ. ಅಷ್ಟೊತ್ತಿಗಾಗಲೇ ಸಿನಿಮಾ ನೋಡುತ್ತಿದ್ದ ಮಹಿಳೆಯೊಬ್ಬರು ಬಂದು ಅಲ್ಲಿದ್ದ ನಟನ ಮೇಲೆ ಹಲ್ಲೆ ನಡೆಸಿದ್ದಾರೆ. ತಾನು ನೋಡಿದ್ದು ಸಿನಿಮಾ ಎನ್ನುವುದನ್ನು ಮರೆತು ಅದರಲ್ಲಿನ ಪಾತ್ರಧಾರಿ ಮೇಲೆ ಗಲಾಟೆ ಮಾಡಿರುವುದು ಇಂಡಸ್ಟ್ರಿಯನ್ನು ತಲ್ಲಣಗೊಳಿಸಿದೆ.
ಲವ್ ರೆಡ್ಡಿ ಚಿತ್ರದಲ್ಲಿ ಅಂಜನ್ ರಾಮಚಂದ್ರ ಮತ್ತು ಶ್ರಾವಣಿ ನಟಿಸಿದ್ದಾರೆ. ಇದು ಕಳೆದ ವಾರ ಥಿಯೇಟರ್‌ಗಳಿಗೆ ಬಂದಿದ್ದು, ಪ್ರೇಕ್ಷಕರಿಂದ ಸೂಪರ್ ಪಾಸಿಟಿವ್ ಟಾಕ್ ಪಡೆದುಕೊಂಡಿದೆ.
ಸಿನಿಮಾದಲ್ಲಿ ಹೀರೋ ಮತ್ತು ಹೀರೋಯಿನ್ ನಡುವಿನ ಕೆಮಿಸ್ಟ್ರಿ ಮತ್ತು ಕ್ಲೈಮ್ಯಾಕ್ಸ್ ಸಿನಿಮಾ ನೋಡಿದ ಪ್ರತಿಯೊಬ್ಬ ಪ್ರೇಕ್ಷಕನ ಮನಸೂರೆಗೊಂಡಿದೆ.
ಇನ್ನು ಹೈದರಾಬಾದ್‌ನ ನಿಜಾಂಪೇಟ್‌ನ ಜಿಪಿಆರ್ ಮಾಲ್ ನ ಥಿಯೇಟರ್ ಗೆ ಚಿತ್ರತಂಡ ತೆರಳಿತ್ತು. ಆಗ ಅಲ್ಲಿ ಚಿತ್ರದ ಕ್ಲೈಮ್ಯಾಕ್ಸ್ ರನ್ ಆಗುತ್ತಿತ್ತು. ಅದೇ ಸಮಯಕ್ಕೆ ಸರಿಯಾಗಿ ಥಿಯೇಟರ್ ನಲ್ಲಿ ಸಿನಿಮಾ ನೋಡುತ್ತಿದ್ದ ಮಹಿಳೆಯೊಬ್ಬರು ಕೋಪದಿಂದ ಅಲ್ಲಿಗೆ ಹೋಗಿ ಅಪ್ಪನ ಪಾತ್ರಧಾರಿ ರಾಮಸ್ವಾಮಿಗೆ ಅಂಗಿ ಹರಿದು ನಾಲ್ಕೈದು ಬಾರಿ ಕಪಾಳಮೋಕ್ಷ ಮಾಡಿದರು.
ಈ ದಿಢೀರ್ ಬೆಳವಣಿಗೆಯಿಂದ ಅಲ್ಲಿಗೆ ಬಂದವರು ಭಯಭೀತರಾಗಿದ್ದರು. ಸಹ ನಟರು ತಕ್ಷಣವೇ ರಾಮಸ್ವಾಮಿ ಅವರನ್ನು ರಕ್ಷಿಸಿದರು. ಬಳಿಕ ಆ ಮಹಿಳೆಗೆ ಇದು ಸಿನಿಮಾ ಎಂದು ತಿಳಿಹೇಳಿದರು. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.