

ಮುಂಬೈ: ದೀಪಾವಳಿ ಸಂದರ್ಭ ಚಿನ್ನದ ಆಭರಣ(Gold Jewellery) ಖರೀದಿಯಿಂದ ಲಾಭ ಬರುತ್ತದೆ, ಲಕ್ಷ್ಮೀ ಕೃಪೆ ಇರುತ್ತದೆ ಎಂಬ ನಂಬಿಕೆ ಭಾರತೀಯರಲ್ಲಿದೆ. ಆದರೆ ಬೆಲೆ ಗಗನಮುಖಿಯಾಗಿದ್ದು, ಇದರ ಜೊತೆಗೆ ಮೇಕಿಂಗ್ ಚಾರ್ಜ್, ವೇಸ್ಟೇಜ್, ಜಿಎಸ್‌ಟಿ, 18 ಕ್ಯಾರೆಟ್ ಇದ್ದರೆ 20, 22 ಮತ್ತು 24 ಎಂದೆಲ್ಲ ಹೇಳಿ ಹೆಚ್ಚು ಹಣ ಪಡೆಯುವವರನ್ನು ಹಲವೆಡೆ ಕಾಣಬಹುದು. ಇಂತಹ ಪರಿಸ್ಥಿತಿಯಲ್ಲಿ ಜನರು ತಿಳಿಯಲೇ ಬೇಕಾದ ಅಂಶಗಳ ಬಗ್ಗೆ ಪರಿಶೀಲಿಸೋಣ.
ಆಭರಣದ ಬೆಲೆಯನ್ನು ನಿರ್ಧರಿಸಲು ಯಾವ ಸೂತ್ರವನ್ನು ಬಳಸಲಾಗುತ್ತದೆ ಎಂಬುದನ್ನು ತಿಳಿಯುವುದು ಅತ್ಯಗತ್ಯ.ಹಬ್ಬದ ಸಂದರ್ಭದಲ್ಲಿ ಚಿನ್ನದ ಬೇಡಿಕೆ ಹೆಚ್ಚಳದಿಂದಾಗಿ, ಅದರ ಬೆಲೆಯೂ ಹೆಚ್ಚಾಗುತ್ತದೆ. ಚಿನ್ನ ಖರೀದಿಗೆ ಮುನ್ನ ಬೆಲೆಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಏಕೆಂದರೆ ಬೆಲೆ ಪ್ರತಿದಿನ ನವೀಕರಿಸಲಾಗುತ್ತದೆ.
ಸಾಮಾನ್ಯವಾಗಿ ಚಿನ್ನದ ಬೆಲೆ ನಿಗದಿಪಡಿಸುವಾಗ ಅದಕ್ಕೆ ಬಳಸಿರುವ ಚಿನ್ನದ ಗುಣಮಟ್ಟ(ಪರ್ಸೆಂಟೇಜ್) ಮೇಲೆ ಅವಲಂಬಿತವಾಗಿರುತ್ತದೆ. ಇನ್ನು ಯಾವ ಕ್ಯಾರೆಟ್ ಚಿನ್ನವನ್ನು ಖರೀದಿಸುತ್ತೀರಿ ಎಂಬುದರ ಮೇಲೆ ಬೆಲೆ ಅವಲಂಬಿತವಾಗಿರುತ್ತದೆ. 18 ಮತ್ತು 22 ಕ್ಯಾರೆಟ್ ಚಿನ್ನ ಆಭರಣದ್ದಾಗಿರುತ್ತದೆ. ಇದು 24 ಕ್ಯಾರೆಟ್ನಂತೆ ಶೇ.100 ಚಿನ್ನವಾಗಿರುವುದಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು.
ವ್ಯಾಪಾರಿಗಳು ಆಭರಣದ ಬೆಲೆ ನಿಗದಿಪಡಿಸುವಾಗ ತೂಕವು ಚಿನ್ನದ ಬೆಲೆಯಿಂದ ಗುಣಿಸಲ್ಪಡುತ್ತದೆ. ಇದರ ನಂತರ, ಮೇಕಿಂಗ್ ಚಾರ್ಜ್ ಮತ್ತು ಹಾಲ್‌ಮಾರ್ಕ್ ಶುಲ್ಕವನ್ನು ಫಲಿತಾಂಶಕ್ಕೆ ಸೇರಿಸಲಾಗುತ್ತದೆ ಮತ್ತು ಅಂತಿಮವಾಗಿ 3 ಪ್ರತಿಶತ ಜಿಎಸ್‌ಟಿ ಸೇರಿಸಲಾಗುತ್ತದೆ.
ವಿವರಿಸಿ ಹೇಳುವುದಾದರೆ, 22ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 68ಸಾವಿರ ರೂ. ಇದ್ದರೆ ಆಭರಣದ ತೂಕ 35 ಗ್ರಾಂ ಇದ್ದರೆ ಈಗ ಇವೆರಡನ್ನೂ ಗುಣಿಸಿ, ನಂತರ ಅದಕ್ಕೆ 1500 ರೂ.ಗಳ ಮಾರ್ಕಿಂಗ್ ಚಾರ್ಜ್ ಸೇರಿಸಿ ಅಂತಿಮವಾಗಿ ಚಿನ್ನಾಭರಣದ ಬೆಲೆ 2,46,640 ರೂ. ಎಂದು ನಿಗದಿಪಡಿಸಲಾಗುತ್ತದೆ. ಈ ಬೆಲೆಯಲ್ಲಿ ಹಾಲ್‌ಮಾರ್ಕ್ ಶುಲ್ಕಗಳು ಮತ್ತು ಜಿಎಸ್‌ಟಿ ಒಳಗೊಂಡಿಲ್ಲ.
ಇನ್ನು ಚಿನ್ನಾಭರಣ ಖರೀದಿಸಿದಾಗ ರಶೀದಿ ತೆಗೆದುಕೊಳ್ಳಬೇಕು. ಅದರಲ್ಲಿ ದಿನಾಂಕ, ಅದರ ಬೆಲೆ ಇತ್ಯಾದಿ ಮಾಹಿತಿ ಒಳಗೊಂಡಿರಬೇಕು. ಏಕೆಂದರೆ ಭವಿಷ್ಯದಲ್ಲಿ ಆಭರಣಗಳನ್ನು ಮಾರಾಟ ಮಾಡುವಾಗ ಪ್ರಯೋಜನಕ್ಕೆ ಬರುತ್ತದೆ.