ಮಾಸ್ಕ್​ ಹಾಕಲು ಹೇಳಿದ್ದಕ್ಕೆ ಪೊಲೀಸರಿಗೇ ಹಲ್ಲೆ ಬೆದರಿಕೆ ಹಾಕಿದ ನಿವೃತ್ತ ಮಹಿಳಾ ಅಧಿಕಾರಿ!

ಪೊಲಿಚೆ
Published on

ಅಹಮದಾಬಾದ್​: ಕರೊನಾ ಸೋಂಕು ಕಡಿಮೆಯಾಗಿದೆಯಾದರೂ ಸಂಪೂರ್ಣವಾಗಿ ಹೋಗಿಲ್ಲ. ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿದರೆ ಮಾತ್ರವೇ ಸೋಂಕು ನಿಯಂತ್ರಣ ಸಾಧ್ಯವಾಗುತ್ತದೆ. ಅದಕ್ಕಾಗಿ ಪ್ರತಿಯೊಬ್ಬರು ಮಾಸ್ಕ್​ ಧರಿಸಿ, ಅಂತರ ಕಾಯ್ದುಕೊಳ್ಳಿ ಎಂದು ಸರ್ಕಾರ ಸಾಕಷ್ಟು ಮನವಿ ಮಾಡಿದೆ. ಆದರೂ ಕೇಳದ ಕೆಲವೊಬ್ಬರು ಅಧಿಕಾರಿಗಳ ಮೇಲೇ ರೇಗಾಡುತ್ತಾರೆ. ನಿವೃತ್ತ ಮಹಿಳಾ ಅಧಿಕಾರಿಯೊಬ್ಬರಿಗೆ ಮಾಸ್ಕ್​ ಹಾಕಿಕೊಳ್ಳುವಂತೆ ಹೇಳಿದ್ದಕ್ಕೆ, ಆಕೆ ಪೊಲೀಸರಿಗೇ ಹಲ್ಲೆ ಬೆದರಿಕೆ ಹಾಕಿರುವ ಘಟನೆ ಅಹಮದಾಬಾದ್​ನಲ್ಲಿ ನಡೆದಿದೆ.

ನಿವೃತ್ತ ಸೇಲ್ಸ್​ ಟ್ಯಾಕ್ಸ್​ ಆಫೀಸರ್​ ಆಗಿರುವ ರೀತಾ ಪಟೇಲ್​(68) ಅವರು ತನ್ನ ಮಗ ಮತ್ತು ಸೊಸೆಯೊಂದಿಗೆ ಕಾರಿನಲ್ಲಿ ಅಹಮದಾಬಾದ್​ನ ನಿರ್ಮಾ ವಿಶ್ವವಿದ್ಯಾಲಯದ ಬಳಿ ಬರುತ್ತಿದ್ದರು. ಈ ವೇಳೆ ಮಗ ಸೊಸೆ ಮಾಸ್ಕ್​ ಹಾಕಿದ್ದರಾದರೂ ರೀತಾ ಅವರು ಹಾಕಿರಲಿಲ್ಲ. ಹೀಗಾಗಿ ಪೊಲೀಸರು ಗಾಡಿ ನಿಲ್ಲಿಸಿದ್ದು, ಮಾಸ್ಕ್​ ಹಾಕಿಕೊಳ್ಳುವಂತೆ ಸೂಚನೆ ನೀಡಿದ್ದಾರೆ. ಆದರೆ ಅಷ್ಟಕ್ಕೇ ಸಿಟ್ಟಿಗೆದ್ದ ರೀತಾ, ನಾನು ಮಾಸ್ಕ್​ ಹಾಕಿಕೊಳ್ಳುವುದಿಲ್ಲ. ಹೆಚ್ಚಿಗೆ ಮಾತನಾಡಿದರೆ ನಿಮ್ಮ ಕೆನ್ನೆ ಮೇಲೆ ಏಟು ಕೊಡಬೇಕಾಗುತ್ತದೆ ಎಂದು ಧಮಕಿ ಹಾಕಿದ್ದಾರೆ.

ಈ ವಿಚಾರವಾಗಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಲಾಕ್​ಡೌನ್​ ನಿಯಮ ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ರೀತಾ ಮತ್ತು ಅವರ ಮಗ ಪಾರಿತೋಷ್​ ಮೇಲೆ ಪೊಲೀಸ್​ ಪ್ರಕರಣ ದಾಖಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net