ಆನ್​ಲೈನ್​ನಲ್ಲಿ ಬಟ್ಟೆ ತರಿಸುವ ಖಯಾಲಿಯೇ? ಈ ವಿಚಾರದ ಬಗ್ಗೆ ಎಚ್ಚರವಾಗಿರಿ!

ಅಸದ್​
Published on

ವಾಷಿಂಗ್ಟನ್​: ಈಗೆಲ್ಲ ಆನ್​ಲೈನ್​ ಕಾಲ. ಏನು ಬೇಕಿದ್ದರೂ ಆನ್​ಲೈನ್​ನಲ್ಲಿ ಆರ್ಡರ್​ ಮಾಡಿದರೆ ಮುಗಿದುಹೋಯಿತು. ಇದೇ ಯೋಚನೆಯಲ್ಲಿ ನೀವೂ ಇದ್ದರೆ ಒಮ್ಮೆ ಈ ಸ್ಟೋರಿ ಓದಿ. ನೀವು ಯಾವ ರೀತಿಯಲ್ಲಿ ಮೋಸ ಹೋಗುತ್ತೀರಿ ಎನ್ನುವುದಕ್ಕೆ ಇಲ್ಲಿದೆ ನೈಜ ಉದಾಹರಣೆ.

ಆರ್ಡರ್​ ಮಾಡಿದ್ದ ಡ್ರೆಸ್​
ಆರ್ಡರ್​ ಮಾಡಿದ್ದ ಡ್ರೆಸ್​

ಅಮೆರಿಕದ ಪ್ರಜೆ ಆಬ್ರೆ ಅವರಿಗೆ ಇನ್ನು ಕೆಲ ದಿನಗಳಲ್ಲಿ ಮದುವೆ ನಿಶ್ಚಯವಾಗಿದೆ. ಮದುವೆಗೆಂದು ಆಕೆ ಆನ್​ಲೈನ್​ನಲ್ಲಿ ವೆಡ್ಡಿಂಗ್​​ ಡ್ರೆಸ್​ ಆರ್ಡರ್​ ಮಾಡಿದ್ದರು. ನಿಗದಿತ ದಿನಾಂಕಕ್ಕೆ ಸರಿಯಾಗಿ ವೆಡ್ಡಿಂಗ್​ ಡ್ರೆಸ್​ ಮನೆಗೆ ಬಂದಿದೆ. ಆದರೆ ಅದನ್ನು ನೋಡಿದ ಆಬ್ರೆ ಗಾಬರಿಯಾಗಿದ್ದಾರೆ. ತಾನು ಆರ್ಡರ್​ ಮಾಡಿದ ಡ್ರೆಸ್​ಗೂ, ಮನೆಗೆ ಬಂದ ಡ್ರೆಸ್​ಗೂ ಯಾವುದೇ ಸಂಬಂಧವೇ ಇಲ್ಲವೆನ್ನುವುದು ಅವರಿಗೆ ತಿಳಿದುಬಂದಿದೆ.

ಇದರಿಂದಾಗಿ ಸಿಟ್ಟಿಗೆದ್ದ ಆಬ್ರೆ, ತಾನು ಬಟ್ಟೆ ಆರ್ಡರ್​ ಮಾಡಿದ್ದ ಸಂಸ್ಥೆಗೆ ಸಿಟ್ಟಿನಿಂದ ಮೇಲ್​ ಮಾಡಿದ್ದಾರೆ. ನೀವು ಇದೇನಾ ಕೆಲಸ ಮಾಡುವುದು ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೆ ಈ ಮೇಲ್​ಗೆ ಬಂದ ಪ್ರತಿಕ್ರಿಯೆ ಮಾತ್ರ ಆಬ್ರೆಯನ್ನು ನಗೆಪಾಟಲಿಗೆ ಸಿಲುಕುವಂತೆ ಮಾಡಿದೆ.

ಆಬ್ರೆ ಡ್ರೆಸ್​ ಹಾಕಿಕೊಂಡಾಗ ಕಂಡಿದ್ದು
ಆಬ್ರೆ ಡ್ರೆಸ್​ ಹಾಕಿಕೊಂಡಾಗ ಕಂಡಿದ್ದು

ವೆಡ್ಡಿಂಗ್​ ಡ್ರೆಸ್​ ಆಬ್ರೆ ಮನೆಗೆ ಡೆಲಿವರಿಯಾದಾಗ ಅದು ಮಗಚಿತ್ತಂತೆ. ಅದನ್ನು ಗಮನಿಸದ ಆಬ್ರೆ ಹಾಗೇ ತೊಟ್ಟು, ಡ್ರೆಸ್​ ಸರಿಯಿಲ್ಲವೆಂದು ದೂರು ನೀಡಿದ್ದಾರೆ. ಅದನ್ನು ಕಂಡ ಸಂಸ್ಥೆ ನೀವು ಡ್ರೆಸ್​ ಅನ್ನು ಸರಿಯಾಗಿ ಹಾಕಿಕೊಳ್ಳಿ ಎಂದು ಪ್ರತಿಕ್ರಿಯಿಸಿದೆ. ಡ್ರೆಸ್​ ಅನ್ನು ಮಗಚಿ ಹಾಕಿಕೊಂಡಾಗ ಅದು ಅವರಿಗೆ ಅತ್ಯುತ್ತಮವಾಗಿ ಕಾಣಿಸಿದೆಯಂತೆ. ಈ ವಿಚಾರವನ್ನು ಸ್ವತಃ ಆಬ್ರೆ ಅವರೇ ಫೇಸ್​ಬುಕ್​ನಲ್ಲಿ ಹಾಕಿಕೊಂಡಿದ್ದಾರೆ. ನನಗೆ 33 ವರ್ಷವಾದರೂ ಕೆಲವೊಮ್ಮೆ ಈ ರೀತಿ ಕಾಮನ್​ಸೆನ್ಸ್​ ಕೈ ಕೊಡುತ್ತದೆ ಎಂದು ತಮ್ಮ ಕಾಲನ್ನು ತಾವೇ ಎಳೆದುಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net