

ಹೈದರಾಬಾದ್: ಗಂಡನ ಕುಡಿತದ ಚಟ ಮತ್ತು ಆತ ಕೊಡುತ್ತಿದ್ದ ಕಿರುಕುಳವನ್ನು ತಾಳಲಾರದ ಹೆಂಡತಿ, ಮನೆಯಲ್ಲಿದ್ದ ಕುಟ್ಟಾಣಿಯಿಂದಲೇ ಗಂಡನ ತಲೆ ಕುಟ್ಟಿ ಕೊಂದಿರುವ ಘಟನೆ ಹೈದರಾಬಾದ್ನಲ್ಲಿ ನಡೆದಿದೆ.
ನಗರದ ಕೆಸ್ಸಾರದ ಉದ್ಯಮಿ ದಶರಥ್ ಹೆಸರಿನ ವ್ಯಕ್ತಿಗೆ ಸೇರಿದ ಫ್ಲ್ಯಾಟ್ ಒಂದಕ್ಕೆ ಶ್ಯಾಮ್ ಹೆಸರಿನ ವ್ಯಕ್ತಿಯನ್ನು ವಾಚ್ಮೆನ್ ಆಗಿ ನೇಮಿಸಿಕೊಳ್ಳಲಾಗಿತ್ತು. ಶ್ಯಾಮ್ಗೆ ಮದುವೆಯಾಗಿದ್ದು, ಮೂರು ವರ್ಷದ ಮಗುವಿದೆ. ಫ್ಲ್ಯಾಟ್ನ ಹತ್ತಿರದಲ್ಲೇ ಶೆಡ್ ಒಂದನ್ನು ನಿರ್ಮಿಸಿಕೊಂಡು ಅದರಲ್ಲೇ ಆತನ ಕುಟುಂಬ ಜೀವಿಸುತ್ತಿತ್ತು. ಕೆಲಸ ಮುಗಿಸಿ ಮನೆಗೆ ಬರುತ್ತಿದ್ದ ಶ್ಯಾಮ್ ಪ್ರತಿದಿನ ಕುಡಿದೇ ಬರುತ್ತಿದ್ದನಂತೆ.
ಗಂಡನ ಕುಡಿತದ ಚಟದಿಂದ ಪತ್ನಿ ಸರೋಜಾ ಬೇಸತ್ತಿದ್ದಳು. ಕುಡಿತ ಬಿಡುವಂತೆ ಸಾಕಷ್ಟು ಬಾರಿ ಬೇಡಿಕೊಂಡಿದ್ದಳು. ಆದರೆ ಅದ್ಯಾವುದಕ್ಕೂ ಶ್ಯಾಮ್ ಬಗ್ಗಿರಲಿಲ್ಲ. ಕುಡಿದು ಬಂದು ಸದಾ ಹೆಂಡತಿಗೆ ಕಿರುಕುಳ ನೀಡುತ್ತಿದ್ದನಂತೆ. ಅದರಂತೆ ಶನಿವಾರದಂದು ಮನೆಗೆ ಕುಡಿದು ಬಂದ ಶ್ಯಾಮ್ ಹೆಂಡತಿ ಮತ್ತು ಮಗುವಿಗೆ ಹೊಡೆಯಲಾರಂಭಿಸಿದ್ದಾನೆ. ಇದರಿಂದಾಗಿ ರೊಚ್ಚಿಗೆದ್ದ ಸರೋಜಾ ಗಂಡನ ವಿರುದ್ಧ ತಿರುಗಿ ಬಿದ್ದಿದ್ದಾಳೆ. ಮನೆಯಲ್ಲಿದ್ದ ಕುಟ್ಟಾಣಿ ತೆಗೆದುಕೊಂಡು ಗಂಡನ ತಲೆಯೆ ಮೇಲೆ ಜೋರಾಗಿ ಹೊಡೆಯಲಾರಂಭಿಸಿದ್ದಾಳೆ. ಆತನ ಮೇಲಿದ್ದ ಸಿಟ್ಟೆಲ್ಲ ತೀರುವವರೆಗೂ ಹೊಡೆದಿದ್ದಾಳೆ. ಭಾರೀ ಹೊಡೆತ ತಿಂದ ಶ್ಯಾಮ್ ಅಲ್ಲಿಯೇ ಸಾವನ್ನಪ್ಪಿದ್ದಾನೆ. ಆತನ ಮನೆಯ ಅಕ್ಕ ಪಕ್ಕದಲ್ಲಿ ನೆಲೆಸಿದ್ದವರು ಈ ವಿಚಾರವನ್ನು ಉದ್ಯಮಿ ದಶರಥಗೆ ಕರೆ ಮಾಡಿ ತಿಳಿಸಿದ್ದಾರೆ. ನಂತರ ಪೊಲೀಸರಿಗೆ ವಿಚಾರ ಮುಟ್ಟಿಸಲಾಗಿದ್ದು, ಸ್ಥಳಕ್ಕೆ ಬಂದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಸರೋಜಾ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. (ಏಜೆನ್ಸೀಸ್)