ಕೇರಳದಲ್ಲಿ ಕಾಡುತ್ತಿರುವ ಕಾಯಿಲೆಗಳು ಒಂದಾ, ಎರಡಾ..; ಕೊರೊನಾ, ಹಕ್ಕಿಜ್ವರ ಬಳಿಕ ಈಗ ಇನ್ನೊಂದು ರೋಗಕ್ಕೆ ಮಹಿಳೆ ಬಲಿ

Died 9 March 20
Published on

ವಯಾನಾಡು: ಕೇರಳದಲ್ಲಿ ಆರು ಮಂದಿಯಲ್ಲಿ ಕೊರೊನಾ ವೈರಸ್ ಪತ್ತೆಯಾಗಿದೆ. ಇನ್ನೊಂದೆಡೆ ಕೋಳಿಕ್ಕೋಡ್​ನಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡು, ಸುತ್ತಮುತ್ತಲಿನ ಕೋಳಿ ಫಾರ್ಮ್​ಗಳನ್ನೂ ಮುಚ್ಚಲಾಗಿದೆ. ಅನೇಕ ಕೋಳಿಗಳನ್ನು ಕೊಂದು, ಸುಟ್ಟುಹಾಕಲಾಗಿದೆ ಎಂದೂ ವರದಿಯಾಗಿದೆ.

ಇದೆಲ್ಲದರ ಮಧ್ಯೆ ಇನ್ನೊಂದು ರೋಗ ಕೇರಳದ ವಯಾನಾಡಿಗೆ ಕಾಲಿಟ್ಟಿದ್ದು, ಮಹಿಳೆಯೋರ್ವರನ್ನು ಬಲಿಪಡೆದಿದೆ. 48 ವರ್ಷದ ಮಹಿಳೆ ಮೀನಾಕ್ಷಿ ಎಂಬುವರು ಮಂಗನ ಕಾಯಿಲೆ (ಕೆಎಫ್​ಡಿ)ಯಿಂದ ಮೃತಪಟ್ಟಿದ್ದಾರೆ.

ಮೀನಾಕ್ಷಿ ಅವರಲ್ಲಿ ಮಂಗನ ಕಾಯಿಲೆ ಇರುವುದು ಮಾರ್ಚ್​ 5ರಂದು ದೃಢಪಟ್ಟಿತ್ತು. ಅವರಿಗೆ ಕೋಳಿಕ್ಕೋಡ್​ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.

ವಯಾನಾಡಿನಲ್ಲಿ ಮೀನಾಕ್ಷಿ ಸೇರಿ ಒಟ್ಟು13 ಜನರಿಗೆ ಕೆಎಫ್​ಡಿ ಸೋಂಕು ತಗುಲಿತ್ತು. ಒಂಭತ್ತು ಜನರಿಗೆ ಚಿಕಿತ್ಸೆ ಪೂರ್ಣಗೊಂಡಿದ್ದು ಅವರು ಗುಣಮುಖರಾಗುತ್ತಿದ್ದಾರೆ. ಇನ್ನುಳಿದ ನಾಲ್ವರು ಇನ್ನೂ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net