
ಬೆಂಗಳೂರು: ಭಾಷೆ ಎಂಬ ದೀಪ ಇಲ್ಲದಿದ್ದರೆ ಜಗತ್ತು ಕತ್ತಲೆಯಲ್ಲಿ ಮುಳುಗುತ್ತಿತ್ತು ಎಂದು ಹಿರಿಯ ಸಾಹಿತಿ ಡಾ.ಹಂಪ ನಾಗರಾಜಯ್ಯ ಹೇಳಿದ್ದಾರೆ.
ನಗರದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಶನಿವಾರ ಆಯೋಜಿಸಲಾಗಿದ್ದ ವೀರಲೋಕ ಬುಕ್ಸ್ನ 3ನೇ ವಾರ್ಷಿಕೋತ್ಸವ ಹಾಗೂ 8 ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾಷೆ ಎಂಬ ದೀಪ ಇಲ್ಲದಿದ್ದರೆ ಎನಾಗುತ್ತಿತ್ತು ಎಂಬುದನ್ನು ಕವಿಯೊಬ್ಬರು ಅದ್ಭುತವಾಗಿ ವರ್ಣಿಸಿದ್ದಾರೆ. ವಿದ್ಯುತ್ ಮತ್ತು ವಿದ್ವತ್ ಎರಡೂ ಮನುಷ್ಯನಿಗೆ ಅಗತ್ಯವಾಗಿದೆ. ವಿದ್ಯುತ್ ಬೆಳಕು ನೀಡಿದರೆ, ವಿದ್ವತ್ ಮನುಷ್ಯನನ್ನು ಬೆಳಗುತ್ತದೆ. ಚಿತ್ರಕಲಾವಿದ ಚಿತ್ರಕಲೆ ಮೂಲಕ ಹಲವು ಕಲ್ಪನೆ ಕೊಟ್ಟಿಕೊಡುತ್ತಾನೆ, ಲೇಖಕನು ಶಬ್ದದಲ್ಲೇ ಎಲ್ಲವನ್ನೂ ಸೃಷ್ಟಿ ಮಾಡುತ್ತಾನೆ ಎಂದು ವಿಶ್ಲೇಷಿಸಿದರು.
ವೀರಲೋಕ ಬುಕ್ಸ್ ಸಂಸ್ಥಾಪಕ ವೀರಕಪುತ್ರ ಶ್ರೀನಿವಾಸ್ ಮಾತನಾಡಿ, ಮೂರು ವರ್ಷಗಳಲ್ಲಿ 200-300 ಪುಸ್ತಕಗಳನ್ನು ಬಿಡುಗಡೆ ಮಾಡಬಹುದಿತ್ತು. ಆದರೆ, ಪುಸ್ತಕ ಸಂತೆ ಹಲವು ಪಾಠ ಕಲಿಸಿದೆ. ಜತೆಗೆ ಗುಣಮಟ್ಟದ ಪುಸ್ತಕಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದರಿಂದ 150 ಕೃತಿಗಳನ್ನು ಬಿಡುಗಡೆ ಮಾಡಲಾಗಿದೆ. ಕನ್ನಡ ಪುಸ್ತಕಗಳಿಗೆ ಮಾರುಕಟ್ಟೆ ಹಿಗ್ಗಿಸುವ ಸಲುವಾಗಿ ಸಂಸ್ಥೆಯನ್ನು ಆರಂಭಿಸಲಾಗಿದೆ ಎಂದರು.
ಬಿಡುಗಡೆಯಾದ ಕೃತಿಗಳು: ಪತ್ರಕರ್ತನ ಪಯಣ (ಲಕ್ಷ್ಮಣ ಕೊಡಸೆ), ಸುಪಾರಿ ಸ್ವಾಮಿ ಮತ್ತು ಸಕೀನ (ರಾಗಂ), ವೀರ ಬಲ್ಲಾಳ (ಡಾ.(ಲಕ್ಷ್ಮಣ ಕೌಂಟಿ), ಲೋಕ ರಾವಣ (ರಾಧಾಕೃಷ್ಣ ಕಲ್ಚಾರ್), ಭಾಷೆ& ಬದುಕು (ಡಾ.ಸಂತೋಷ ಹಾನಗಲ್ಲ), ದೇವ ಸನ್ನಾಧಿ (ಗಿರಿಜಾ ರೈಕ್ವ), ರುಚಿಗೆ ತಕ್ಕಷ್ಟು (ಅಕ್ಷತಾ ಪಾಂಡವಪುರ), ಏನಾಗುತ್ತೆ ಗುರು (ಆರ್.ಬಿ. ಗುರುಬಸವರಾಜ) ಪುಸ್ತಕಗಳನ್ನು ಸಮಾರಂಭದಲ್ಲಿ ಬಿಡುಗಡೆ ಮಾಡಲಾಯಿತು. ನಟ ಮಂಡ್ಯ ರಮೇಶ್ ನಿರ್ದೇಶಿಸಿರುವ “ಸ್ಥಾವರವೂ ಜಂಗಮ’ ನಾಟಕ ಪ್ರದರ್ಶನ ನಡೆಯಿತು. ಲೇಖಕ ಜಿ.ಎನ್. ಮೋಹನ್ ಹಾಜರಿದ್ದರು.
ಮೂವತ್ತು ವರ್ಷ ಹಿಂದೆ ಮಾಧ್ಯಮ ಕ್ಷೇತ್ರ ಹೇಗಿತ್ತು ಸೇರಿ ಇತ್ಯಾದಿ ಮಾಹಿತಿ ಕ್ರೋಡಿಕರಿಸಿ ಪುಸ್ತಕವನ್ನು ಬರೆದಿದ್ದಾನೆ. ಪತ್ರಕರ್ತರು, ಪತ್ರಿಕೋದ್ಯಮಿಗಳು, ವಿದ್ಯಾರ್ಥಿಗಳು ಈ ಪುಸ್ತಕವನ್ನು ಓದುವ ಅಗತ್ಯ ಇದೆ.
| ಲಕ್ಷ್ಮಣ ಕೊಡಸೆ, ಹಿರಿಯ ಪತ್ರಕರ್ತ
ರಾಷ್ಟ್ರಕ್ಕೆ ಭಾಷಾ ನೀತಿ ಅಗತ್ಯ ಇದೆಯೇ, ದ್ವಿಭಾಷಾ ಮತ್ತು ತ್ರಿಭಾಷಾ ನೀತಿಯಿಂದ ಜಾರಿಗೆ ತಂದರೆ ಅನುಕೂಲ ಮತ್ತು ಪರಿಣಾಮಗಳೇನು ಎಂಬುದರ ಕುರಿತು ಪುಸ್ತಕದಲ್ಲಿ ನಮೂದಿಸಿದ್ದೇನೆ. ಇದನ್ನು ಪ್ರತಿಯೊಬ್ಬರೂ ಓದಬೇಕು.
| ಡಾ. ಸಂತೋಷ ಹಾನಗಲ್ಲ, ಲೇಖಕ.
ಗೋವುಗಳಿಗೆ ರಾಷ್ಟ್ರೀಯ ಪ್ರಾಣಿ ಸ್ಥಾನಮಾನ ನೀಡಿ: ಕೇಂದ್ರಕ್ಕೆ ಮಹೇಂದ್ರ ಮುಣೋತ್ ಮನವಿ