ಹೊರ್ತಿ: ಇಂದಿನ ಯುಗದಲ್ಲಿ ಮೊಬೈಲ್, ಕಂಪ್ಯೂಟರ್ ಮತ್ತು ಟಿವಿ ಅತಿಯಾದ ವೀಕ್ಷಣೆಯಿಂದ ಜನರು ಅದರಲ್ಲೂ ಯುವಕರು ಕಣ್ಣಿನ ಅಂಧತ್ವಕ್ಕೆ ಬಲಿಯಾಗುತ್ತಿರುವುದು ದೊಡ್ಡ ದುರಂತ.
ಪಂಚಜ್ಞಾನೇಂದ್ರಿಯಗಳಲ್ಲೇ ಕಣ್ಣು ಅತ್ಯಂತ ಶ್ರೇಷ್ಠವಾದದ್ದು, ಕಣ್ಣಿನ ರಕ್ಷಣೆ ಸರಿಯಾಗಿ ಮಾಡದಿದ್ದರೆ ಬದುಕು ಕತ್ತಲೆಯಾಗುತ್ತದೆ. ಕಣ್ಣಿನ ಕುರಿತು ಹೆಚ್ಚಿನ ಕಾಳಜಿ ವಹಿಸಬೇಕಾದ ಅಗತ್ಯವಿದೆ ಎಂದು ವಿಜಯಪುರದ ಅನುಗ್ರಹ ಕಣ್ಣಿನ ಆಸ್ಪತ್ರೆ ನೇತ್ರತಜ್ಞೆ ಡಾ.ಪೂರ್ಣಿಮಾ ಸಾತಲಗಾಂವ ಹೇಳಿದರು.
ಸಮೀಪದ ಚಡಚಣ ತಾಲೂಕಿನ ಸುಕ್ಷೇತ್ರ ಇಂಚಗೇರಿ ಮಠದಲ್ಲಿ ಗುರುಶಿಷ್ಯರ ಪುಣ್ಯಸ್ಮರಣೆ ಮಾಘ ಸಪ್ತಾಹದ ಪ್ರಯುಕ್ತ ಭಾನುವಾರ ವಿಜಯಪುರ ಅನುಗ್ರಹ ಕಣ್ಣಿನ ಆಸ್ಪತ್ರೆ ವತಿಯಿಂದ ಹಮ್ಮಿಕೊಂಡಿದ್ದ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದರು.
ಈ ಶಿಬಿರದಲ್ಲಿ ಎಲ್ಲ ವಯೋಮಾನದ 350ಕ್ಕೂ ಹೆಚ್ಚು ಜನರಿಗೆ ಉಚಿತ ನೇತ್ರ ತಪಾಸಣೆ ನಡೆಸಲಾಯಿತು. 72 ದೃಷ್ಟಿದೋಷವುಳ್ಳ ಜನರಿಗೆ ಉಚಿತವಾಗಿ ನೇತ್ರ ಶಸ್ತ್ರಚಿಕಿತ್ಸೆಗೆ ಆಯ್ಕೆ ಮಾಡಲಾಯಿತು.
ಶ್ರೀಮಠದ ರೇವಣಸಿದ್ಧ ಮಹಾರಾಜರು ಶಿಬಿರದ ಸಾನ್ನಿಧ್ಯವಹಿಸಿ ವೈದ್ಯರನ್ನು ಸತ್ಕರಿಸಿ ಮಾತನಾಡಿ, ಈ ಸಲ ಹಮ್ಮಿಕೊಂಡ ಶಿಬಿರದಲ್ಲಿ ಇಂಚಗೇರಿ ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಎಲ್ಲ ಜನರಿಗೆ ಬಹಳಷ್ಟು ಅನುಕೂಲವಾಗಿದೆ. ಪ್ರತಿ ವರ್ಷ ಜರುಗುವ ಸಪ್ತಾಹದಲ್ಲಿ ಇಂಥ ಶಿಬಿರವನ್ನು ನಡೆಸಲು ಆಮಂತ್ರಣ ನೀಡಿದರು. ಶಿಬಿರದ ನೇತೃತ್ವವನ್ನು ಕಾಡಸಿದ್ದ ಮುರಗೋಡ ವಹಿಸಿದ್ದರು.
ಕ್ಯಾಂಪ್‌ನ ವಿಶೇಷ ಅಧಿಕಾರಿ ದತ್ತಾತ್ರೇಯ ಹೊಸಮಠ, ಸಿಬ್ಬಂದಿ ಡಾ.ಪ್ರಿಯಾಂಕಾ, ರಫೀಯಾನಾಜ್, ಅರ್ಪಿತಾ, ಅನುರಾಧಾ, ಸ್ಫೀ ರ್ತಿ, ಅಪ್ತಾಬ್ ,ವಿನಾಯಕ, ಭಾವೇಶ, ಮಣಿಕಂಠರವರು ಶಿಬಿರದಲ್ಲಿ ಸೇವೆ ಸಲ್ಲಿಸಿದರು. ಶಿಬಿರದ ವ್ಯವಸ್ಥಾಪಕ ಸಿದ್ದಣ್ಣ ಸಾತಲಗಾಂವ, ಸುನೀಲ ಮುರಗೋಡ, ಶ್ರೀಶೈಲ ಹಿರೇಮಠ, ಬಾಪುರಾಯ ಸಾತಲಗಾಂವ, ಗುರುಪುತ್ರ ಮುರಗೋಡ, ಮಹಮ್ಮದ್ ಮುಲ್ಲಾ, ಎಂ.ಟಿ.ಬಿರಾದಾರ ಮತ್ತಿತರರು ಉಪಸ್ಥಿತರಿದ್ದರು.