

ಬೆಂಗಳೂರು: ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಸ್ಟಾರ್ ನಟಿ ಅನುಷ್ಕಾ ಶರ್ಮ ಜೋಡಿಗೆ ಕ್ರಿಕೆಟ್ ವಲಯದಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ವಿರಾಟ್ ಕೊಹ್ಲಿ ಗುರುವಾರವಷ್ಟೇ ಇನ್ಸ್ಟಾಗ್ರಾಂನಲ್ಲಿ 2021ರ ಜನವರಿಯಲ್ಲಿ ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಹೇಳಿಕೊಂಡಿದ್ದರು. ಇದರ ಬೆನ್ನಲ್ಲೇ ಕ್ರಿಕೆಟ್ ವಲಯ ಹಾಗೂ ಬಾಲಿವುಡ್ ಮಂದಿ ತಾರಾ ಜೋಡಿಗೆ ಶುಭಾಶಯ ಸಲ್ಲಿಸಿದ್ದಾರೆ.
ಸದ್ಯ ಐಪಿಎಲ್ನಲ್ಲಿ ಆಡುವ ಸಲುವಾಗಿ ವಿರಾಟ್ ಕೊಹ್ಲಿ ದುಬೈನಲ್ಲಿದ್ದು, ಇದೀಗ ಕ್ರಿಕೆಟ್ನತ್ತ ಸಂಪೂರ್ಣ ತೊಡಗಿಸಿಕೊಂಡಿದ್ದಾರೆ. ಈ ನಡುವೆ ಅಪ್ಪನಾಗುತ್ತಿರುವ ವಿಷಯವನ್ನು ಕೊಹ್ಲಿ ಬಹಿರಂಗಗೊಳಿಸಿದ್ದೆ ತಡ, ದಿಗ್ಗಜ ಸಚಿನ್ ತೆಂಡುಲ್ಕರ್, ಸಹಪಾಠಿಗಳಾದ ಯಜುವೇಂದ್ರ ಚಾಹಲ್, ಕ್ರೀಸ್ ಗೇಲ್, ಹರ್ಭಜನ್ ಸಿಂಗ್, ವೃದ್ಧಿಮಾನ್ ಸಾಹ, ಅಜಿಂಕ್ಯ ರಹಾನೆ, ಉಮೇಶ್ ಯಾದವ್ ಸೇರಿದಂತೆ ಹಲವು ಮಂದಿ ತಮ್ಮ ಸಾಮಾಜಿಕ ಪುಟಗಳಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.
ಕರೊನಾ ವೈರಸ್ ಲಾಕ್ಡೌನ್ನಿಂದಾಗಿ ವಿರಾಟ್ ಕೊಹ್ಲಿ ಕಳೆದ 6 ತಿಂಗಳಿಂದ ಮುಂಬೈನಲ್ಲೇ ಪತ್ನಿ ಅನುಷ್ಕಾ ಜತೆಗೆ ಉಳಿದುಕೊಂಡಿದ್ದರು, 13ನೇ ಐಪಿಎಲ್ ಯುಎಇಗೆ ಸ್ಥಳಾಂತರಗೊಂಡ ಹಿನ್ನೆಲೆಯಲ್ಲಿ ಕೊಹ್ಲಿ ಕೂಡ ಕಳೆದ ವಾರ ಆರ್ಸಿಬಿ ತಂಡದ ಜತೆ ಪ್ರಯಾಣಿಸದೆ, ಪ್ರತ್ಯೇಕವಾಗಿ ಮುಂಬೈನಿಂದ ದುಬೈಗೆ ತೆರಳಿದ್ದರು. ಸೆ.19 ರಿಂದ ನ.10 ರವರೆಗೆ 53 ದಿನಗಳ ಕಾಲ 60 ಪಂದ್ಯಗಳು ನಡೆಯಲಿವೆ.