

ಮೂಲ್ಕಿ: ಅತಿಕಾರಿಬೆಟ್ಟು ಶಿಮಂತೂರು- ಬಲೆಪು ಕಿನ್ನಿಗೋಳಿ ರಸ್ತೆ ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿಯಿಂದ ಹೊಂಡ ಗುಂಡಿಯಿಂದ ತುಂಬಿದ್ದು, ರಸ್ತೆಯ ವಿದ್ಯುತ್ ಕಂಬಕ್ಕೆ ಕಾಡುಬಳ್ಳಿಗಳು ಸುತ್ತಿಕೊಂಡು ದಾರಿದೀಪದ ಬೆಳಕು ರಸ್ತೆಗೆ ಬೀಳದೆ ಪ್ರಯಾಣಿಕರಿಗೆ ಹಾಗೂ ವಾಹನ ಸವಾರರಿಗೆ ಸಂಚಾರ ಅಪಾಯಕಾರಿಯಾಗಿದೆ ಎಂದು ಸ್ಥಳೀಯ ಸಾಮಾಜಿಕ ಕಾರ್ಯಕರ್ತ ದಿನೇಶ್ಚಂದ್ರ ಅಜಿಲ ದೂರಿದ್ದಾರೆ.
ರಸ್ತೆ ಬದಿಯ ಲೈನ್‌ಗಳಿಗೆ ಅಡ್ಡ ಇರುವ ತೆಂಗಿನ ಸೋಗೆ, ಮರದ ಕೊಂಬೆ ಹಾಗೂ ಇನ್ನಿತರ ತಡೆಗಳ ಬಗ್ಗೆ ಮೂಲ್ಕಿ ಮೆಸ್ಕಾಂ ಇಲಾಖೆಗೆ ಮಾಹಿತಿ ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಲೆಗೆ ಹೋಗುವ ಮಕ್ಕಳು ಇದೇ ದಾರಿಯಲ್ಲಿ ಸಂಚರಿಸುತ್ತಿದ್ದು ಮಳೆ ಬಂದು ಒದ್ದೆಯಾದ ಬಳ್ಳಿಗಳನ್ನು ಪ್ರಮಾದವಶಾತ್ ಸ್ಪರ್ಶಿಸಿದಲ್ಲಿ ಪ್ರಾಣಾಪಾಯವಾಗುವ ಸಾಧ್ಯತೆಯಿದೆ. ಪಂಚಾಯಿತಿ ಈ ಬಗ್ಗೆ ಗಮನ ಹರಿಸಬೇಕಾಗಿದೆ.
ಪಂಜಿನಡ್ಕ ಕ್ರಾಸ್‌ನಿಂದ ಬಲೆಪು ಮೂಲಕ ಕಿನ್ನಿಗೋಳಿ ಕಡೆಗೆ ಹೋಗುವ ಪ್ರಧಾನ ರಸ್ತೆಯಾಗಿದ್ದು ಅನೇಕ ವಾಹನಗಳು ಸಂಚರಿಸುತ್ತಿವೆ. ಆದರೆ ರಸ್ತೆ ಅಭಿವೃದ್ಧಿ ಹಾಗೂ ಮೂಲಸೌಕರ್ಯದಿಂದ ವಂಚಿತವಾಗಿದೆ. ಕೂಡಲೇ ಮೆಸ್ಕಾಂ ಇಲಾಖೆ ವಿದ್ಯುತ್ ಕಂಬದಲ್ಲಿರುವ ಬಳ್ಳಿಗಳನ್ನು ತೆರವುಗೊಳಿಸಬೇಕು ಹಾಗೂ ಸಂಬಂಧಪಟ್ಟ ಇಲಾಖೆ ರಸ್ತೆ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.