ಮಹಾರಾಜ ಟ್ರೋಫಿಯಲ್ಲಿ ಗುಲ್ಬರ್ಗಾ ಮಿಸ್ಟಿಕ್ಸ್​, ಹುಬ್ಬಳ್ಳಿ ಟೈಗರ್ಸ್​ ಶುಭಾರಂಭ

maha web
Published on

ಬೆಂಗಳೂರು: ಹಾಲಿ ಚಾಂಪಿಯನ್​ ಗುಲ್ಬರ್ಗಾ ಮಿಸ್ಟಿಕ್ಸ್​ ತಂಡ ಸರ್ವಾಂಗೀಣ ನಿರ್ವಹಣೆ ತೋರುವ ಮೂಲಕ 2ನೇ ಆವೃತ್ತಿಯ ಮಹಾರಾಜ ಟ್ರೋಫಿ ಕೆಎಸ್​ಸಿಎ ಟಿ20 ಟೂರ್ನಿಯಲ್ಲಿ ಶುಭಾರಂಭ ಕಂಡಿದೆ. ಕಳೆದ ವರ್ಷದ ಫೈನಲಿಸ್ಟ್​ ತಂಡಗಳ ನಡುವೆ ನಡೆದ ಉದ್ಘಾಟನಾ ಪಂದ್ಯದಲ್ಲಿ ಎಡಗೈ ವೇಗಿ ಅಭಿಲಾಷ್​ ಶೆಟ್ಟಿ (17ಕ್ಕೆ 3) ಕರಾರುವಾಕ್​ ಬೌಲಿಂಗ್​ ದಾಳಿಯ ನೆರವಿನಿಂದ ಗುಲ್ಬರ್ಗಾ ತಂಡ ಬೆಂಗಳೂರು ಬ್ಲಾಸ್ಟರ್ಸ್​ ವಿರುದ್ಧ 6 ವಿಕೆಟ್​ಗಳಿಂದ ಗೆಲುವು ದಾಖಲಿಸಿತು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ಆರಂಭಗೊಂಡ ಟೂರ್ನಿಯ ಮೊದಲ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಬೆಂಗಳೂರು, 6 ವಿಕೆಟ್​ಗೆ 137 ರನ್​ ಗಳಿಸಲಷ್ಟೇ ಶಕ್ತವಾಯಿತು. ಪ್ರತಿಯಾಗಿ ಗುಲ್ಬರ್ಗಾ ತಂಡ 17.3 ಓವರ್​ಗಳಲ್ಲಿ 4 ವಿಕೆಟ್​ಗೆ 138 ರನ್​ ಗಳಿಸಿ ಜಯಭೇರಿ ಬಾರಿಸಿತು. ಆರಂಭಿಕರಾದ ಎಲ್​ಆರ್​ ಚೇತನ್​ (36) ಮತ್ತು ಆದರ್ಶ್​ ಪ್ರಜ್ವಲ್​ (31) ಬಿರುಸಿನ ಆರಂಭ ಒದಗಿಸಿ ಗುಲ್ಬರ್ಗಾ ಚೇಸಿಂಗ್​ಗೆ ಬಲ ತುಂಬಿದರು. ಬಳಿಕ ಕೆವಿ ಅನೀಶ್​ (29*) ಮತ್ತು ಅಮಿತ್​ ವರ್ಮ (28) ಉಪಯುಕ್ತ ಕೊಡುಗೆ ನೀಡಿ ಇನ್ನೂ 2.3 ಓವರ್​ ಬಾಕಿ ಇರುವಂತೆಯೇ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾದರು.

ಅಭಿಲಾಷ್​ ಕಡಿವಾಣ

ಅಭಿಲಾಷ್​ ಶೆಟ್ಟಿ ಪಂದ್ಯದ ಮೊದಲ ಓವರ್​ನಲ್ಲಿ ನಾಯಕ ಮಯಾಂಕ್​ ಅಗರ್ವಾಲ್​ (4) ವಿಕೆಟ್​ ಕಬಳಿಸಿದರೆ, ಮರುಓವರ್​ನಲ್ಲಿ ಮತ್ತೋರ್ವ ಆರಂಭಿಕ ಡಿ. ನಿಶ್ಚಲ್​ (1) ವಿಕೆಟ್​ ಪಡೆದರು. ನಂತರ ಜೆಸ್ವಂತ್​ ಆಚಾರ್ಯ (29) ಮತ್ತು ಪವನ್​ ದೇಶಪಾಂಡೆ (14) ಮತ್ತೋರ್ವ ವೇಗಿ ಶರಣ್​ ಗೌಡ (24ಕ್ಕೆ 2) ಬಲೆಗೆ ಬಿದ್ದರು. ಇದರಿಂದ ಬೆಂಗಳೂರು ತಂಡ 58 ರನ್​ಗಳಿಗೆ 4 ವಿಕೆಟ್​ ಕಳೆದುಕೊಂಡ ತತ್ತರಿಸಿತು. ನಂತರ ವಿಕೆಟ್​ ಕೀಪರ್​&ಬ್ಯಾಟರ್​ ಸೂರಜ್​ ಅಹುಜಾ (62*ರನ್​, 46 ಎಸೆತ, 5 ಬೌಂಡರಿ, 2 ಸಿಕ್ಸರ್​) ಅರ್ಧಶತಕದಾಸರೆಯ ಮೂಲಕ ಬೆಂಗಳೂರಿಗೆ ಗೌರವಯುತ ಮೊತ್ತ ಪೇರಿಸಲು ನೆರವಾದರು.

ಬೆಂಗಳೂರು ಬ್ಲಾಸ್ಟರ್ಸ್​: 6 ವಿಕೆಟ್​ಗೆ 137 (ನಿಶ್ಚಲ್​ 1, ಮಯಾಂಕ್​ 4, ಜೆಸ್ವಂತ್​ 29, ಪವನ್​ ದೇಶಪಾಂಡೆ 14, ಸೂರಜ್​ ಅಹುಜಾ 62*, ಅಭಿಲಾಷ್​ ಶೆಟ್ಟಿ 17ಕ್ಕೆ 3, ಶರಣ್​ ಗೌಡ 24ಕ್ಕೆ 2). ಗುಲ್ಬರ್ಗಾ ಮಿಸ್ಟಿಕ್ಸ್​: 17.3 ಓವರ್​ಗಳಲ್ಲಿ 4 ವಿಕೆಟ್​ಗೆ 138 (ಎಲ್​ಆರ್​ ಚೇತನ್​ 36, ಆದರ್ಶ ಪ್ರಜ್ವಲ್​ 31, ಕೆವಿ ಅನೀಶ್​ 29*, ಅಮಿತ್​ ವರ್ಮ 28, ಶುಭಾಂಗ್​ ಹೆಗ್ಡೆ 25ಕ್ಕೆ 3, ಸ್ರಾರ್ಜ್​ 21ಕ್ಕೆ 1). ಪಂದ್ಯಶ್ರೇಷ್ಠ: ಅಭಿಲಾಷ್​ ಶೆಟ್ಟಿ.

ಹುಬ್ಬಳ್ಳಿ ಟೈಗರ್ಸ್​ ಶುಭಾರಂಭ

ಮನೀಷ್​ ಪಾಂಡೆ ಸಾರಥ್ಯದ ಹುಬ್ಬಳ್ಳಿ ಟೈಗರ್ಸ್​ ತಂಡ ಮಳೆಬಾಧಿತ ದಿನದ ಎರಡನೇ ಪಂದ್ಯದಲ್ಲಿ ಮೈಸೂರು ವಾರಿಯರ್ಸ್​ ವಿರುದ್ಧ ವಿಜೆಡಿ ನಿಯಮದನ್ವಯ 9 ವಿಕೆಟ್​ಗಳಿಂದ ಸುಲಭ ಗೆಲುವು ದಾಖಲಿಸಿತು. ಮೊದಲು ಬ್ಯಾಟಿಂಗ್​ಗೆ ಇಳಿದ ಮೈಸೂರು 9 ವಿಕೆಟ್​ಗೆ 111 ರನ್​ ಪೇರಿಸಲಷ್ಟೇ ಶಕ್ತವಾಯಿತು. ಪ್ರತಿಯಾಗಿ ಹುಬ್ಬಳ್ಳಿ 4.3 ಓವರ್​ಗಳಲ್ಲಿ 1 ವಿಕೆಟ್​ಗೆ 51 ರನ್​ ಗಳಿಸಿದಾಗ ಮಳೆ ಅಡಚಣೆ ತಂದಿತು. ನಂತರ 13 ಓವರ್​ಗಳಲ್ಲಿ 80 ರನ್​ಗಳ ಪರಿಷತ ಗುರಿ ಪಡೆದ ಹುಬ್ಬಳ್ಳಿ, ಮೊಹಮದ್​ ತಾಹ (61*) ಬಿರುಸಿನಾಟದಿಂದ 8.1 ಓವರ್​ಗಳಲ್ಲಿ 1 ವಿಕೆಟ್​ಗೆ 82 ರನ್​ ಗಳಿಸಿ ಶುಭಾರಂಭ ಕಂಡಿತು.

ಇಂದಿನ ಪಂದ್ಯಗಳು

ಮಂಗಳೂರು ಡ್ರ್ಯಾಗನ್ಸ್​​-ಶಿವಮೊಗ್ಗ ಲಯನ್ಸ್​

ಆರಂಭ: ಮಧ್ಯಾಹ್ನ 1.00

ಗುಲ್ಬರ್ಗಾ ಮಿಸ್ಟಿಕ್ಸ್​-ಹುಬ್ಬಳ್ಳಿ ಟೈಗರ್ಸ್​

ಆರಂಭ: ಸಂಜೆ 5.30

ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​ ಕನ್ನಡ/2

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net