

ಚೆನ್ನೈ: ಗಾಯದಿಂದ ಚೇತರಿಸಿಕೊಂಡು 7 ತಿಂಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಮರಳಿದ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಮತ್ತೆ ಗಾಯಗೊಂಡಿದ್ದಾರೆ. ಇದರಿಂದಾಗಿ ಕಿವೀಸ್ ವಿಶ್ವಕಪ್ನಲ್ಲಿ ಹ್ಯಾಟ್ರಿಕ್ ಗೆಲುವಿನೊಂದಿಗೆ ಬೀಗುತ್ತಿರುವ ನಡುವೆಯೂ ಹಿನ್ನಡೆ ಎದುರಿಸಿದೆ. ಬಾಂಗ್ಲಾದೇಶ ವಿರುದ್ಧದ ಪಂದ್ಯದ ವೇಳೆ ರನ್ ಓಡುವಾಗ ಎಡಗೈಗೆ ಬಡಿದ ಚೆಂಡು ಅವರ ಹೆಬ್ಬೆರಳಿನ ಮೂಳೆ ಮುರಿತಕ್ಕೆ ಕಾರಣವಾಗಿದೆ.
ಪಂದ್ಯದ ಬಳಿಕ ನಡೆಸಿದ ಎಕ್ಸ್-ರೇ ಪರೀಕ್ಷೆಯಲ್ಲಿ ಇದು ದೃಢಪಟ್ಟಿದೆ. ಇದರಿಂದಾಗಿ ಅವರು ಅಕ್ಟೋಬರ್ 22ರಂದು ಧರ್ಮಶಾಲಾದಲ್ಲಿ ಆತಿಥೇಯ ಭಾರತ ವಿರುದ್ಧ ನಡೆಯಲಿರುವ ಪಂದ್ಯವನ್ನೂ ಸೇರಿದಂತೆ ಮುಂದಿನ ಒಟ್ಟು 3 ಪಂದ್ಯಗಳನ್ನು ತಪ್ಪಿಸಿಕೊಳ್ಳಲಿದ್ದಾರೆ. ಅಫ್ಘಾನಿಸ್ತಾನ (ಅ.18) ಮತ್ತು ಆಸ್ಟ್ರೆಲಿಯಾ (ಅ.28) ವಿರುದ್ಧದ ಪಂದ್ಯಗಳಿಂದಲೂ ಅವರು ಹೊರಗುಳಿಯಲಿದ್ದಾರೆ. ಈ ಮುನ್ನ ಟೂರ್ನಿಯ ಆರಂಭಿಕ 2 ಪಂದ್ಯಗಳಲ್ಲೂ ಅವರು ಆಡಿರಲಿಲ್ಲ.
ಶೀಘ್ರ ಚೇತರಿಕೆ ಕಂಡರೆ ಕೊನೇ 3 ಪಂದ್ಯಗಳಲ್ಲಿ ಆಡಬಹುದಾಗಿದೆ. ಕೇನ್ಗೆ ಮೀಸಲು ಆಟಗಾರರಾಗಿ ತಂಡದಲ್ಲಿರಲು ಅನುಭವಿ ಬ್ಯಾಟರ್ ಟಾಮ್ ಬ್ಲಂಡೆಲ್ ಭಾರತದತ್ತ ಪ್ರಯಾಣ ಬೆಳೆಸಿದ್ದಾರೆ. ಕೇನ್ ಈ ಮುನ್ನ ಮಾರ್ಚ್ನಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯದ ವೇಳೆ ಮೊಣಕಾಲು ಗಾಯಕ್ಕೊಳಗಾಗಿದ್ದರು.