WPL2024; ಸುದೀರ್ಘ ಕಾಯುವಿಕೆಗೆ ಅಂತ್ಯ ಹಾಡಲಿದ್ದಾರಾ ಆರ್​ಸಿಬಿ ವನಿತೆಯರು?

RCB Womens
Published on

ನವದೆಹಲಿ: ಫೆಬ್ರವರಿ 23ರಂದು ಶುರುವಾದ ವುಮೆನ್ಸ್​ ಪ್ರೀಮಿಯರ್​ ಲೀಗ್​ ಕ್ರಿಕೆಟ್​ ಟೂರ್ನಿ ಅಂತಿಮ ಹಂತ ತಲುಪಿದ್ದು, ಮೆಗ್​ ಲ್ಯಾನಿಂಗ್​ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್​ ತಂಡವು ಫಿನಾಲೆಗೆ ಲಗ್ಗೆ ಇಟ್ಟಿದೆ. ಶುಕ್ರವಾರ (ಮಾರ್ಚ್​ 15) ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್​ ನಡುವೆ ಎಲಿಮಿನೇಟರ್​ ಪಂದ್ಯ ನಡೆಯಲಿದ್ದು, ಈ ಪಂದ್ಯ ಸಾಕಷ್ಟು ಮಹತ್ವ ಪಡೆದುಕೊಂಡಿದೆ.

ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಹಾಗೂ ಹಾಲಿ ಚಾಂಪಿಯನ್ಸ್​ ಮುಂಬೈ ಇಂಡಿಯನ್ಸ್​ ನಡುವಿನ ಪಂದ್ಯದಲ್ಲಿ ಆರ್​ಸಿಬಿ ಎಲ್ಲರ ಹಾಟ್​ ಫೇವರಿಟ್​ ಆಗಿದ್ದು, ಪ್ರಶಸ್ತಿ ಗೆಲ್ಲಲು ಗೋಲ್ಡನ್ ಅವಕಾಶವಿದೆ. ಒಂದು ವೇಳೆ ಇದು ಸಾಧ್ಯವಾದರೆ ಸ್ಮೃತಿ ಪಡೆ ಐತಿಹಾಸ ನಿರ್ಮಿಸಲಿದೆ. ಹಾಗೆಯೇ ಈ ಗೆಲುವು ಆರ್‌ಸಿಬಿ ಅಭಿಮಾನಿಗಳ 16 ವರ್ಷಗಳ ಕಾಯುವಿಕೆಯನ್ನು ಕೊನೆಗೊಳ್ಳಿಸಲಿದೆ.

2008ರಿಂದಲೂ ಐಪಿಎಲ್​ನ ಭಾಗವಾಗಿರುವ ಆರ್​ಸಿಬಿ ಮೂರು ಬಾರಿ ಫಯನಲ್​ ಪ್ರವೇಶಿಸಿದರೂ ಕಪ್​ ಗೆಲಲ್ಲು ವಿಫಲವಾಗಿದೆ. ತಂಡದ ಅಭಿಮಾನಿಗಳು ಬಹಳ ಸಮಯದಿಂದ ಪ್ರಶಸ್ತಿಗಾಗಿ ಕಾಯುತ್ತಿದ್ದಾರೆ. ಆದರೆ ಪ್ರತಿ ಬಾರಿಯೂ ನಿರಾಸೆಯೊಂದಿಗೆ ಲೀಗ್ ಕೊನೆಗೊಳ್ಳುತ್ತಿದೆ. ಇದೀಗ ಸ್ಮೃತಿ ಪಡೆ ಆರ್‌ಸಿಬಿ ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ಈ ಬಾರಿ WPLನಲ್ಲಿ ಪ್ರಶಸ್ತಿ ಗೆಲ್ಲುವ ಅವಕಾಶವನ್ನು ಪಡೆದುಕೊಂಡಿದೆ. ಆದರೆ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸುವುದು ಆರ್‌ಸಿಬಿಗೆ ದೊಡ್ಡ ಸವಾಲಾಗಿದೆ.

RCB Womens

ಈ ಬಾರಿಯ WPLನಲ್ಲಿ ಉಭಯ ತಂಡಗಳ ನಡುವೆ ಎರಡು ಪಂದ್ಯಗಳು ನಡೆದಿವೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಈ ಸೀಸನ್​ನ ಮೊದಲ ಪಂದ್ಯದಲ್ಲಿ ಮುಂಬೈ ತಂಡ ಆರ್‌ಸಿಬಿ ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿತ್ತು. ಆ ನಂತರ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಮಂದಾನ ಪಡೆ ಮುಂಬೈ ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿತು. ಈ ಮೂಲಕ ಹಳೆಯ ಸೋಲಿಗೆ ಸೇಡು ತೀರಿಸಿಕೊಂಡಿತ್ತು.

ಆಡಿರುವ 8 ಪಂದ್ಯಗಳಲ್ಲಿ 5 ಪಂದ್ಯಗಳನ್ನು ಗೆದ್ದಿರುವ ಮುಂಬೈ ಇಂಡಿಯನ್ಸ್ ಎರಡನೇ ಸ್ಥಾನದಲ್ಲಿದೆ. ಎಲಿಮಿನೇಟರ್‌ನಲ್ಲಿ ಆರ್‌ಸಿಬಿ, ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಬೇಕಾದರೆ, ಮುಂಬೈ ತಂಡದ ಅಗ್ರ ಕ್ರಮಾಂಕವನ್ನು ಬೇಗ ಕಟ್ಟಿಹಾಕಬೇಕಿದೆ. ನಾಯಕಿ ಸ್ಮೃತಿ ಮಂದಾನ ಸೇರಿದಂತೆ ಆರ್​ಸಿಬಿಯ ಅಗ್ರಕಮಾಂಕ ಬ್ಯಾಟರ್​ಗಳು ಮೈಚಳಿ ಬಿಟ್ಟು ಬ್ಯಾಟ್​​ ಬೀಸಬೇಕಿದೆ. ತಂಡದಲ್ಲಿರುವ ಭಾರತದ ಬೌಲರ್​ಗಳು ಮ್ಯಾಜಿಕ್ ಮಾಡುತ್ತಿಲ್ಲ. ಇದು ತಂಡಕ್ಕೆ ಸಾಕಷ್ಟು ಹಿನ್ನಡೆಯನ್ನುಂಟು ಮಾಡಿದೆ. ಹೀಗಾಗಿ ಮುಂಬೈ ವಿರುದ್ಧ ಇಡೀ ತಂಡ ಅದ್ಭುತ ಪ್ರದರ್ಶನ ನೀಡಿದರಷ್ಟೇ ಆರ್​ಸಿಬಿಗೆ ಫೈನಲ್​ಗೇರುವ ಅವಕಾಶ ಸಿಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net