ಬನ್ಸಾಲಿ ಹೊಸ ಚಿತ್ರದಲ್ಲಿ ನಟಿಸ್ತಾರಾ ರಣಬೀರ್-ದೀಪಿಕಾ?

Deepika - Ranbir Final
Published on

ಲಾಕ್‌ಡೌನ್ ಇಲ್ಲದಿದ್ದರೆ ಸಂಜಯ್ ಲೀಲಾ ಬನ್ಸಾಲಿ ಇಷ್ಟು ಹೊತ್ತಿಗೆ ‘ಗಂಗೂಬಾಯಿ ಕತಿಯಾವಾಡಿ’ ಚಿತ್ರವನ್ನು ಮುಗಿಸಿಬಿಡುತ್ತಿದ್ದರೇನೋ? ಆದರೆ, ಲಾಕ್‌ಡೌನ್ ಆಗಿ, ಅವರ ಪ್ಲಾನ್‌ಗಳೆಲ್ಲಾ ಉಲ್ಟಾ ಆಗಿವೆ. ಹಾಗಂತ ಬನ್ಸಾಲಿ ಸಾಹೇಬರು ಸುಮ್ಮನೆ ಕುಳಿತಿಲ್ಲ. ಸದ್ದಿಲ್ಲದೆ ಹೊಸದೊಂದು ಚಿತ್ರದ ಸ್ಕ್ರಿಪ್ಟ್ ಕೆಲಸ ಮಾಡಿ ಮುಗಿಸಿದ್ದಾರೆ. ಎಲ್ಲಾ ಅಂದುಕೊಂಡಂತೆ ಆದರೆ, ‘ಗಂಗೂಬಾಯಿ ಕತಿಯಾವಾಡಿ’ ಚಿತ್ರದ ನಂತರ ಈ ಚಿತ್ರ ಶುರು ಮಾಡಲಿದ್ದಾರೆ. ಅಂದಹಾಗೆ, ಅವರು ಮುಗಿಸಿರುವ ಸ್ಕ್ರಿಪ್ಟ್ ಯಾವುದು ಗೊತ್ತಾ? ‘ಬೈಜು ಬಾವ್ರಾ’.

ಹೆಸರೆಲ್ಲೋ ಕೇಳಿದ ಹಾಗಿದೆಯಲ್ಲಾ ಅಂತನಿಸಬಹುದು. 1952ರಲ್ಲಿ ಭರತ್ ಭೂಷಣ್ ಮತ್ತು ಮೀನಾ ಕುಮಾರಿ ಅಭಿನಯದ ‘ಬೈಜು ಬಾವ್ರಾ’ ಎಂಬ ಚಿತ್ರ ಬಂದಿತ್ತು. ನೌಶಾದ್ ಸಂಗೀತ ಸಂಯೋಜನೆಯ ಈ ಚಿತ್ರ ಸೂಪರ್ ಹಿಟ್ ಆಗಿದ್ದಷ್ಟೇ ಅಲ್ಲ, ಆ ಹಾಡುಗಳು ಈಗಲೂ ಜನಪ್ರಿಯ. ಈಗ ಅದೇ ಚಿತ್ರವನ್ನು ಮತ್ತೊಮ್ಮೆ ರೀಮೇಕ್ ಮಾಡುವುದಕ್ಕೆ ಬನ್ಸಾಲಿ ಯೋಚಿಸುತ್ತಿದ್ದಾರೆ. ಅಷ್ಟೇ ಅಲ್ಲ, ಬೈಜು ಪಾತ್ರ ಮಾಡುವುದಕ್ಕೆ ರಣಬೀರ್ ಕಪೂರ್‌ರನ್ನ ಅವರು ಸಂಪರ್ಕಿಸಿದ್ದಾರೆ. ಇನ್ನು ನಾಯಕಿ ಗೌರಿ ಪಾತ್ರಕ್ಕೆ ಅವರ ಗಮನದಲ್ಲಿರುವುದು ದೀಪಿಕಾ ಪಡುಕೋಣೆ.

ಅಕ್ಬರನ ಕಾಲಘಟ್ಟದಲ್ಲಿ ನಡೆಯುವ ಈ ಕಾಸ್ಟೂಮ್ ಡ್ರಾಮಾಗೆ ಈಗಾಗಲೇ ಬನ್ಸಾಲಿ ಇಬ್ಬರ ಜತೆಗೂ ಒಂದು ರೌಂಡು ಮಾತುಕತೆ ಮುಗಿಸಿದ್ದಾರೆ. ಇಬ್ಬರೂ ಕಥೆ ಕೇಳಿ ನೋಡೋಣ ಎಂದಿದ್ದಾರೆ. ಇಬ್ಬರಿಗೂ ಕಥೆಯೇನೋ ಇಷ್ಟವಾಗಿದೆ. ಆದರೆ, ಇಬ್ಬರೂ ಜತೆಯಾಗಿ ನಟಿಸುವುದಕ್ಕೆ ಒಂದು ಸಮಸ್ಯೆ ಇದೆ. ಅದು ಹಳೆಯ ನೆನಪುಗಳು. ಎಲ್ಲರಿಗೂ ಗೊತ್ತಿರುವಂತೆ, ಒಂದು ಕಾಲದಲ್ಲಿ ರಣಬೀರ್ ಮತ್ತು ದೀಪಿಕಾ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರೂ ಮದುವೆಯಾಗುತ್ತಾರೆ ಎಂಬ ಸುದ್ದಿ ಇತ್ತು. ಅಷ್ಟರಲ್ಲಿ ಕಾರಣಾಂತರಗಳಿಂದ ರಣಬೀರ್‌ರಿಂದ ದೂರವಾಗಿದ್ದರು ದೀಪಿಕಾ. ಈಗ ದೀಪಿಕಾ, ರಣವೀರ್ ಸಿಂಗ್‌ರನ್ನು ಮದುವೆಯಾಗಿ ನೆಮ್ಮದಿಯಾಗಿದ್ದಾರೆ. ಇನ್ನೊಂದು ಕಡೆ ರಣಬೀರ್ ಸಹ ಆಲಿಯಾ ಭಟ್ ಅವರನ್ನು ಪ್ರೀತಿಸುತ್ತಿದ್ದಾರೆ. ಹೀಗಿರುವಾಗ ಮತ್ತೆ ಜತೆಯಾಗಿ ನಟಿಸಿ, ಹಳೆಯ ನೆನಪುಗಳನ್ನು ಕೆದಕಬೇಕಾ ಎಂಬ ಪ್ರಶ್ನೆ ಸಹಜವಾಗಿಯೇ ಇಬ್ಬರಲ್ಲೂ ಇದ್ದೇ ಇರುತ್ತದೆ.

ರಣಬೀರ್ ಮತ್ತು ದೀಪಿಕಾ ಇಬ್ಬರೂ ಹಳೆಯ ನೆನಪುಗಳನ್ನು ಹಿಂದಕ್ಕೆ ಹೋಗಿ ಒಟ್ಟಿಗೆ ನಟಿಸುತ್ತಾರೋ ಅಥವಾ ಬನ್ಸಾಲಿ ಬೇರೆ ಕಲಾವಿದರನ್ನಿಟ್ಟುಕೊಂಡು ಚಿತ್ರ ಮಾಡುವ ಪರಿಸ್ಥಿತಿ ಬರುತ್ತದೋ ಎಂಬ ಪ್ರಶ್ನೆ ಎಲ್ಲರಲ್ಲೂ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net