

ಮುಂಬೈ: ಬಂಡಾಯ ಶಾಸಕರ ವಿರುದ್ಧ ಕ್ರಮಕ್ಕೆ ಮುಂದಾಗಿರುವ ಶಿವಸೇನೆ, ಇದೀಗ ರೆಬೆಲ್ ಶಾಸಕರಿಗೆ ಮತ್ತೊಮ್ಮೆ ಎಚ್ಚರಿಕೆ ನೀಡಿದೆ. ಮಹಾರಾಷ್ಟ್ರ ಸರ್ಕಾರದಲ್ಲಿ ಪ್ರವಾಸೋದ್ಯಮ ಸಚಿವರೂ ಆಗಿರುವ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಪುತ್ರ ಆದಿತ್ಯ ಠಾಕ್ರೆ ಬಂಡಾಯ ಶಾಸಕರ ವಿರುದ್ಧ ಗುಡುಗಿದ್ದಾರೆ.
ನಮ್ಮ ಸರ್ಕಾರದ ವಿರುದ್ಧ ಶಾಸಕರನ್ನು ಬಂಡಾಯವೆಬ್ಬಿಸಿದ ಏಕನಾಥ್ ಶಿಂಧೆ ಅವರು ಮಾಡಿರುವ ದ್ರೋಹವನ್ನು ಎಂದೂ ಮರೆಯಲ್ಲ, ಉಳಿದ ಶಾಸಕರಿಗೂ ಇದೇ ಮಾತನ್ನು ಹೇಳಲು ಇಚ್ಚಿಸುತ್ತೇನೆ ಎಂದು ಹೇಳಿದ್ದಾರೆ.
ಶಿವಸೇನ-ಕಾಂಗ್ರೆಸ್ಎನ್ಸಿಪಿ ಮೈತ್ರಿ ಸರ್ಕಾರಕ್ಕೆ ಮುಂದೆಯೂ ಗೆಲುವಾಗಲಿದೆ. ಇವರು ಮಾಡಿರುವ ದ್ರೋಹ ಎಲ್ಲರಿಗೂ ಗೊತ್ತಿದೆ. ನಾವೂ ಕೂಡ ಅದನ್ನು ಎಂದಿಗೂ ಮರೆಯುವುದಿಲ್ಲ ಎಂದಿದ್ದಾರೆ.ಈ ಮಧ್ಯೆ ಬಂಡಾಯ ಶಾಸಕರಿಗೆ ಅನರ್ಹತೆಯ ನೊಟೀಸ್ ನೀಡಲಾಗಿದ್ದು, ಸೋಮವಾರದೊಳಗೆ ಉತ್ತರಿಸುವಂತೆ ಸೂಚಿಸಿದೆ. ಬಂಡಾಯವೆಬ್ಬಿಸಿದ ಏಕನಾಥ್ ಶಿಂಧೆ ವಿರುದ್ಧವೂ ಕ್ರಮ ಕೈಗೊಂಡಿದೆ.
ಬಾಳಾಠಾಕ್ರೆ ಅವರ ಸಿದ್ಧಾಂತದ ಮೇಲೆಯೇ ಪಕ್ಷ ಮುನ್ನಡೆಯಲಿದೆ, ಹಿಂದುತ್ವ ಹಾಗೂ ಮರಾಠ ನಮ್ಮ ಹೆಮ್ಮೆ. ಇದನ್ನು ಇಬ್ಭಾಗ ಮಾಡಲು ಎಂದಿಗೂ ಶಿವಸೇನೆ ಬಯಸುವುದಿಲ್ಲ ಎಂದು ಸಂಸದ ಸಂಜಯ್ ರಾವತ್ ಹೇಳಿದ್ದಾರೆ. (ಏಜೆನ್ಸೀಸ್)