ಸಾಧ್ಯವಾದ್ರೆ ಮುಂದಿನ ಜನ್ಮದಲ್ಲಿ ಸಿಗೋಃಣ; 5 ವರ್ಷ ಪ್ರೀತಿಸಿದ ಪ್ರಿಯಕರನಿಗೆ ಮೆಸ್ಸೇಜ್ ಹಾಕಿ ಯುವತಿ ಎಸ್ಕೇಪ್​

Marriage Ceremony
Published on

ಲಖನೌ: ಇತ್ತೀಚಿನ ದಿನಗಳಲ್ಲಿ ಮದುವೆಗೆ ಸಂಬಂಧಿಸಿದ ಸುದ್ದಿಗಳು ಒಂದಿಲ್ಲೊಂದು ಕಾರಣಕ್ಕೆ ಜನರ ಗಮನ ಸೆಳೆಯುತ್ತಿದ್ದು, ಕ್ಷುಲಕ ಕಾರಣಗಳಿಗೆ ಮದುವೆಗಳು ಮುರಿದು ಬೀಳುತ್ತಿವೆ. ಊಟ ಬಡಿಸುವುದು ತಡವಾಯಿತು, ವರ ಡ್ಯಾನ್ಸ್ ಮಾಡಿದ ಎಂಬ ಕಾರಣಕ್ಕೆ ಮದುವೆಗಳು ಮುರಿದು ಬೀಳುತ್ತಿದ್ದು, ಇದೀಗ ವಧುವೊಬ್ಬಳು ಮದುವೆಯ ಹಿಂದಿನ ದಿನ ವಾಟ್ಸ್​ಆ್ಯಪ್​ನಲ್ಲಿ ಮೆಸೇಜ್ ಹಾಕಿ ಮದುವೆಮನೆಯಿಂದ ನಾಪತ್ತೆಯಾಗಿರುವ ಘಟನೆ ಉತ್ತರಪ್ರದೇಶದ ಖುಷಿನಗರದಲ್ಲಿ ನಡೆದಿದ್ದು, ವಧುವಿಗಾಗಿ ತೀವ್ರ ಶೋಧ ನಡೆಯುತ್ತಿದೆ.

ಖುಷಿನಗರ ಜಿಲ್ಲೆಯ ಖಡ್ಡಾ ಗ್ರಾಮದ ನಿವಾಸಿಗಳಾದ ಪುಷ್ಪಾ ಮತ್ತು ಮುಕೇಶ್​ ಕಳೆದ ಐದು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದು, ಕುಟುಂಬಸ್ಥರನ್ನು ಒಪ್ಪಿಸಿ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದರು. ಆರಂಭದಲ್ಲಿ ಇವರಿಬ್ಬರ ಪ್ರೀತಿಗೆ ಕುಟುಂಬಸ್ಥರು ವಿರೋಧಿಸಿದ್ದರಾದರು ಅಂತಿಮವಾಗಿ ಮಕ್ಕಳ ಹಠಕ್ಕೆ ಮಣಿದು ವಿವಾಹಕ್ಕೆ ಒಪ್ಪಿದ್ದರು.

ಅದರಂತೆ ಮಾರ್ಚ್ 06ಕ್ಕೆ ಇವರಿಬ್ಬರು ವಿವಾಹವನ್ನು ನಿಶ್ಚಯಿಸಲಾಗಿತ್ತು. ಮದುವೆಗೆ ಸಂಬಂಧಿಸಿದ ಶಾಸ್ತ್ರಗಳು ಹಾಗೂ ಇನ್ನಿತರೆ ಕಾರ್ಯಗಳು ಕೂಡ ಜೋರಾಗಿ ನಡೆಯುತ್ತಿತ್ತು. ಈ ವೇಳೆ ವರ ಮುಖೇಶ್​ಗೆ ವಾಟ್ಸ್​ಆಯಪ್​ನಲ್ಲಿ ನಾವು ಸಾಧ್ಯವಾದ್ರೆ ಮುಂದಿನ ಜನ್ಮದಲ್ಲಿ ಸಿಗೋಣ ಎಂದು ವಧು ಮೆಸ್ಸೇಜ್ ಮಾಡಿದ್ದು, ಪರಿಶೀಲಿಸಿದಾಗ ಆಕೆ ಮದುವೆಮನೆಯಲ್ಲಿ ಇಲ್ಲದಿರುವುದು ಕಂಡು ಬಂದಿದೆ. ಕೂಡಲೇ ವರ ಹಾಗೂ ವಧುವಿನ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ವಧುವನ್ನು ಹುಡುಕಿಕೊಡುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.

Bride Missing

ಇನ್ನೂ ವಧುವಿನ ಅಕ್ಕ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ವರದಕ್ಷಿಣೆಯಾಗಿ ನಾವು 1 ಲಕ್ಷ ರೂ. ಹಣ ಮತ್ತು ಕೆಲವು ವಸ್ತುಗಳನ್ನು ಕೊಡಲು ಮುಂದಾಗಿದ್ದೆವು. ಆದರೆ, ವರನ ಕಡೆಯವರು ಹೆಚ್ಚಿನದ್ದನ್ನು ಬೇಡಿಕೆ ಇಡಲು ಶುರು ಮಾಡಿದರು. ಆ ನಂತರ ಮದುವೆಯನ್ನು ಕ್ಯಾನ್ಸಲ್ ಮಾಡಲಾಗಿತ್ತು. ಆ ನಂತರ ಹಿರಿಯರ ಸಮ್ಮುಖದಲ್ಲಿ ನಡೆದ ಮಾತುಕತೆಯಲ್ಲಿ ಮದುವೆಯನ್ನು ಮಾಡಲು ವರನ ಕಡೆಯವರು ಒಪ್ಪಿಕೊಂಡಿದ್ದರು.

ಮದುವೆ ದಿನ ಹತ್ತಿರಬರುತ್ತಿದ್ದಂತೆ ವರನ ಕಡೆಯವರು ಮತ್ತಷ್ಟು ಬೇಡಿಕೆ ಇರಿಸಲು ಪ್ರಾರಂಭಿಸಿದರು. ಹಲ್ದಿ ಶಾಸ್ತ್ರದ ಬಳಿಕ ನನ್ನ ಸಹೋದರಿ ವರನೊಂದಿಗೆ ವಾಟ್ಸ್​ಆ್ಯಪ್​ನಲ್ಲಿ ಚಾಟ್ ಮಾಡಿತ್ತಿದ್ದಳು. ಆ ನಂತರ ಫೋನಿನಲ್ಲಿ ಮಾತನಾಡಿಕೊಂಡು ಮನೆಯಿಂದ ಹೊರಹೋದವಳು ನಾಪತ್ತೆಯಾಗಿದ್ದಾಳೆ. ನೆಬುವಾ ನೌರಂಗಿಯಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ಪೊಲೀಸರು ಹುಡುಕಾಡುತ್ತಿದ್ದಾರೆ ಎಂದು ವಧುವಿನ ಸಹೋದರಿ ತಿಳಿಸಿದ್ದಾರೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net