ಭಾರತದಲ್ಲಿ 2036ರ ಒಲಿಂಪಿಕ್ಸ್​ ಆತಿಥ್ಯ ವಹಿಸಲು 64 ಸಾವಿರ ಕೋಟಿ ರೂ. ವೆಚ್ಚ?

web oly
Published on

ಅಹಮದಾಬಾದ್​: ಅವಳಿ ನಗರಗಳಾದ ಅಹಮದಾಬಾದ್​ ಮತ್ತು ಗಾಂಧಿನಗರ 2036ರ ಒಲಿಂಪಿಕ್ಸ್​ಗೆ ಆತಿಥ್ಯ ವಹಿಸುವ ಮಹತ್ವಾಕಾಂೆಯ ಯೋಜನೆಯನ್ನು ಸಿದ್ಧಪಡಿಸಿದೆ. ಇದರನ್ವಯ ಒಲಿಂಪಿಕ್ಸ್​ ಆತಿಥ್ಯಕ್ಕೆ ಅಂದಾಜು 34,700 ಕೋಟಿಯಿಂದ 64,000 ಕೋಟಿ ರೂಪಾಯಿ ವೆಚ್ಚವಾಗುವ ರೂಪುರೇಷೆ ಸಿದ್ಧಗೊಂಡಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನಂತೆ ಒಲಿಂಪಿಕ್ಸ್​ಗೆ ಬಿಡ್​ ಸಲ್ಲಿಸಲಿರುವ ಭಾರತದ ಉನ್ನತ ಮಟ್ಟದ ಸಮನ್ವಯ ಸಮಿತಿಯು ಈ ವಾರ ಗಾಂಧಿನಗರದಲ್ಲಿ ಸಭೆ ನಡೆಸಿದೆ. ಈ ವೇಳೆ ಒಲಿಂಪಿಕ್ಸ್​ ಆತಿಥ್ಯದ ಬಜೆಟ್​ ರೂಪುರೇಷೆಯನ್ನೂ ಅಂತಿಮಗೊಳಿಸಲಾಗಿದೆ. ಗುಜರಾತ್​ನ ಅವಳಿ ನಗರಗಳ ಜತೆಗೆ ಭಾರತದ ಇತರ 4 ನಗರಗಳಾದ ಭೋಪಾಲ್​, ಮುಂಬೈ, ಗೋವಾ, ಪುಣೆಯಲ್ಲೂ ಒಲಿಂಪಿಕ್ಸ್​ನ ಕೆಲ ಕ್ರೀಡಾಸ್ಪರ್ಧೆಗಳನ್ನು ಆಯೋಜಿಸುವ ಯೋಜನೆ ಹಾಕಿಕೊಳ್ಳಲಾಗಿದೆ.

ಒಲಿಂಪಿಕ್ಸ್​ ಆತಿಥ್ಯ ಬಜೆಟ್​ ಒಟ್ಟು 2 ವಿಧದಲ್ಲಿ ವಿಂಗಡನೆಯಾಗಲಿದೆ. ಒಂದನೆಯದು ಒಲಿಂಪಿಕ್ಸ್​ ಆತಿಥ್ಯಕ್ಕೆ ನೇರವಾಗಿ ಸಂಬಂಧಿಸಿದ್ದು. ಇದನ್ನು ಒಲಿಂಪಿಕ್​ ಗೇಮ್ಸ್​ ಸಂಟನಾ ಸಮಿತಿ (ಒಸಿಒಜಿ) ನಿರ್ವಹಿಸುತ್ತದೆ. ಇದರಲ್ಲಿ ಕ್ರೀಡಾಸ್ಪರ್ಧೆ, ಕಾರ್ಯಪಡೆ, ವಸತಿ, ತಂತ್ರಜ್ಞಾನ, ಸಾರಿಗೆ ಮತ್ತು ತಾತ್ಕಾಲಿಕ ಮೂಲಸೌಕರ್ಯಗಳಂಥ ಕಾರ್ಯನಿರ್ವಹಣೆಯ ವೆಚ್ಚಗಳು ಒಳಗೊಂಡಿರಲಿವೆ. ಇದರ ಬಜೆಟ್​ 18,600 ಕೋಟಿಯಿಂದ 41,100 ಕೋಟಿ ರೂ.ವರೆಗೆ ಇರಲಿದೆ.

ಇನ್ನೊಂದು ಒಲಿಂಪಿಕ್ಸ್​ ಆತಿಥ್ಯಕ್ಕೆ ಪರೋಕ್ಷವಾಗಿ ಸಂಬಂಧಿಸಿದ ಬಜೆಟ್​ ಆಗಿರುತ್ತದೆ. ಇದರಲ್ಲಿ ಆತಿಥೇಯ ನಗರಗಳ ಮೂಲಸೌಕರ್ಯ ಮತ್ತು ಕಾರ್ಯನಿರ್ವಹಣೆ ವೆಚ್ಚ ಇರುತ್ತದೆ. ಇದು ಒಸಿಒಜಿ ಯೇತರ ಬಜೆಟ್​ ಆಗಿರುತ್ತದೆ. ಒಸಿಒಜಿ ಯೇತರ ಬಜೆಟ್​ನಲ್ಲಿ ಕ್ರೀಡೆ ಮತ್ತು ಕ್ರೀಡೇತರ ತಾಣಗಳ ಬಂಡವಾಳ ಹೂಡಿಕೆ ಒಳಗೊಂಡಿರುತ್ತದೆ. ಇದರ ಬಜೆಟ್​ 16,100 ಕೋಟಿಯಿಂದ 22,900 ಕೋಟಿ ರೂಪಾಯಿವರೆಗೆ ಅಂದಾಜು ಹಾಕಲಾಗಿದೆ. ಇದರಲ್ಲಿ ಕೆಲ ತಾಣಗಳ ನವೀಕರಣ, ಹೊಸ ತಾಣಗಳ ನಿರ್ಮಾಣ ಮತ್ತು ತಾತ್ಕಾಲಿಕ ವ್ಯವಸ್ಥೆಗಳ ವೆಚ್ಚವೂ ಒಳಗೊಂಡಿರುತ್ತದೆ.

ಅಹಮದಾಬಾದ್​ ಯೋಜನೆಯ ಒಸಿಒಜಿ ಯೇತರ ಬಜೆಟ್​, ಹಿಂದಿನ ಮತ್ತು ಭವಿಷ್ಯದ ಎಲ್ಲ ಒಲಿಂಪಿಕ್ಸ್​ ಆತಿಥ್ಯದ ವೆಚ್ಚಕ್ಕಿಂತ ಕಡಿಮೆಯೇ ಆಗಿರಲಿದೆ. 2012ರ ಲಂಡನ್​ ಒಲಿಂಪಿಕ್ಸ್​ನ ಒಸಿಒಜಿ ಯೇತರ ವೆಚ್ಚ 71,073 ಕೋಟಿ ರೂ. ಆಗಿತ್ತು. ಆಗ ಸಮಗ್ರ ಲಂಡನ್​ ಮೂಲಸೌಕರ್ಯ ಅಭಿವೃದ್ಧಿಗೊಳಿಸಿದ್ದು ಇದಕ್ಕೆ ಕಾರಣ. 2016ರ ರಿಯೋ ಒಲಿಂಪಿಕ್ಸ್​ನ ಒಸಿಒಜಿ ಯೇತರ ವೆಚ್ಚ 49.956 ಕೋಟಿ ರೂ. ಆಗಿತ್ತು. 2021ರ ಟೋಕಿಯೊ ಒಲಿಂಪಿಕ್ಸ್​ನಲ್ಲಿ ಇದು 27,046 ಕೋಟಿ ರೂ. ಆಗಿದ್ದರೆ, 2024ರ ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ 21,343 ಕೋಟಿ ರೂ. ಆಗಿತ್ತು.

2036ರ ಒಲಿಂಪಿಕ್ಸ್​ ವೇಳೆ ಶೇ.30ರಷ್ಟು ಅಸ್ತಿತ್ವದಲ್ಲಿರುವ ಸೌಕರ್ಯಗಳನ್ನೇ ಬಳಸುವ ಯೋಜನೆ ಹಾಕಿಕೊಳ್ಳಲಾಗಿದೆ. ಜತೆಗೆ ಶೇ. 60 ಯೋಜಿತ ಕ್ರೀಡಾ ಮೂಲಸೌಕರ್ಯವನ್ನೇ ಉಪಯೋಗಿಸಲಾಗುತ್ತದೆ. ಶೇ. 10 ಮಾತ್ರ ತಾತ್ಕಾಲಿಕ ಮೂಲಸೌಕರ್ಯದ ಅಗತ್ಯವಿದೆ ಎಂದು ರೂಪುರೇಷೆ ವರದಿಯಲ್ಲಿ ತಿಳಿಸಲಾಗಿದೆ.

ಹಿಂದಿನ&ಭವಿಷ್ಯದ ಒಲಿಂಪಿಕ್ಸ್​ ಒಸಿಒಜಿ ವೆಚ್ಚ

2012-ಲಂಡನ್​: 22,449 ಕೋಟಿ ರೂ.

2016-ರಿಯೋ: 16,461 ಕೋಟಿ ರೂ.

2021-ಟೋಕಿಯೊ: 21,425 ಕೋಟಿ ರೂ.

2024-ಪ್ಯಾರಿಸ್​: 32,765 ಕೋಟಿ ರೂ.

2028-ಎಲ್​ಎ: 43,633 ಕೋಟಿ ರೂ.*

2032-ಲಂಡನ್​: 26,522 ಕೋಟಿ ರೂ.*

2036-ಭಾರತ: 41,100 ಕೋಟಿ ರೂ.*

*ಅಂದಾಜು ವೆಚ್ಚದ ಲೆಕ್ಕಾಚಾರ

3 ಆಶ್ರಮಗಳ ಭೂಮಿ ಬಳಕೆ!

ಅಹಮದಾಬಾದ್​ನಲ್ಲಿ ಒಲಿಂಪಿಕ್ಸ್​ ಆತಿಥ್ಯಕ್ಕಾಗಿ ಕ್ರೀಡಾಗ್ರಾಮ ಮತ್ತು ಇತರ ಸೌಕರ್ಯಗಳನ್ನು ನಿರ್ಮಿಸುವ ಸಲುವಾಗಿ 650 ಎಕರೆ ಭೂಮಿಯನ್ನು ಸ್ವಾಧಿನಪಡಿಸಿಕೊಳ್ಳಲು ಗುಜರಾತ್​ ಸರ್ಕಾರ ಮುಂದಾಗಿದೆ. ಇದರನ್ವಯ 3 ಆಶ್ರಮಗಳಾದ ಸಂತ ಶ್ರೀ ಅಸರಮ್​ ಆಶ್ರಮ, ಭಾರತೀಯ ಸೇವಾ ಸಮಾಜ ಮತ್ತು ಸದಾಶಿವ ಪ್ರಜ್ಞಾ ಮಂಡಲದ ಭೂಮಿಯನ್ನು ಭೂಪೇಂದ್ರ ಪಟೇಲ್​ ನೇತೃತ್ವದ ಸರ್ಕಾರ ವಶಪಡಿಸಿಕೊಳ್ಳಲಿದೆ ಮತ್ತು ಅದಕ್ಕೆ ಬದಲಾಗಿ ಈ ಟ್ರಸ್ಟ್​ಗಳಿಗೆ ಬೇರೆ ಕಡೆ ಜಾಗವನ್ನೂ ನೀಡಲಿದೆ ಎಂದು ವರದಿಯಾಗಿದೆ. ಅತ್ಯಾಚಾರ ಪ್ರಕರಣದಲ್ಲಿ ತಪ್ಪಿತಸ್ಥನಾಗಿ ಜೈಲು ಸೇರಿರುವ ಅಸರಮ್​ನ ಆಶ್ರಮ ಮೊಟೆರಾದಲ್ಲಿದೆ. ಇದು ಒಲಿಂಪಿಕ್ಸ್​ ಆತಿಥ್ಯದ ಪ್ರಮುಖ ಕೇಂದ್ರವಾದ ಸರ್ದಾರ್​ ಪಟೇಲ್​ ಕ್ರೀಡಾ ಸಂಕೀರ್ಣದ ಸಮೀಪದಲ್ಲೇ ಇದೆ.

2026ರ ವೇಳೆ ಆತಿಥ್ಯ ನಿರ್ಧಾರ

ಅಂತಾರಾಷ್ಟ್ರೀಯ ಒಲಿಂಪಿಕ್ಸ್​ ಸಮಿತಿಗೆ (ಐಒಸಿ) ಜಿಂಬಾಬ್ವೆಯ ಕ್ರಿಸ್ಟಿ ಕೋವೆಂಟ್ರಿ ಇತ್ತೀಚೆಗೆ ಹೊಸ ಅಧ್ಯೆಯಾಗಿ ಆಯ್ಕೆಯಾಗಿದ್ದು, 2036ರ ಒಲಿಂಪಿಕ್ಸ್​ ಆತಿಥೇಯ ದೇಶದ ಆಯ್ಕೆ ಪ್ರಕ್ರಿಯೆಗೆ ಶ್ರೀ ಚಾಲನೆ ನೀಡುವುದಾಗಿ ಹೇಳಿದ್ದಾರೆ. 2036ರ ಒಲಿಂಪಿಕ್ಸ್​ ಆತಿಥ್ಯಕ್ಕೆ ಸದ್ಯ ಭಾರತದೊಂದಿಗೆ ಕತಾರ್​, ಸೌದಿ ಅರೇಬಿಯಾ ಸಹಿತ ಒಟ್ಟು 10 ದೇಶಗಳು ರೇಸ್​ನಲ್ಲಿವೆ. 2026ರ ವೇಳೆ ಈ ಪೈಕಿ ಒಂದು ದೇಶಕ್ಕೆ ಆತಿಥ್ಯವನ್ನು ಐಒಸಿ ಅಂತಿಮಗೊಳಿಸಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net