ಭಾರತ ಮಹಿಳಾ ತಂಡದ ವಾರ್ಷಿಕ ಗುತ್ತಿಗೆ ಪಟ್ಟಿ ಪ್ರಕಟ; ಸಿ ಶ್ರೇಣಿಯಲ್ಲಿ ಕನ್ನಡತಿ ಶ್ರೇಯಾಂಕಾ ಪಾಟೀಲ್​

web shreya
Published on

ಮುಂಬೈ: ಭಾರತ ಮಹಿಳಾ ಕ್ರಿಕೆಟ್​ ತಂಡದ ಆಟಗಾರ್ತಿಯರ 2024-25ರ ಸಾಲಿನ ವಾರ್ಷಿಕ ಗುತ್ತಿಗೆ ಪಟ್ಟಿಯನ್ನು ಬಿಸಿಸಿಐ ಸೋಮವಾರ ಬಿಡುಗಡೆಗೊಳಿಸಿದೆ. ಭಾರತ ತಂಡದ ನಾಯಕಿ ಹರ್ಮಾನ್​ಪ್ರೀತ್​ ಕೌರ್​, ಉಪನಾಯಕಿ ಸ್ಮೃತಿ ಮಂದನಾ ಮತ್ತು ಆಲ್ರೌಂಡರ್​ ದೀಪ್ತಿ ಶರ್ಮ ಎ ಶ್ರೇಣಿಯ ಗುತ್ತಿಗೆ ಉಳಿಸಿಕೊಂಡಿದ್ದರೆ, ಆಲ್ರೌಂಡರ್​ ಹಾಗೂ ಕನ್ನಡತಿ ಶ್ರೇಯಾಂಕಾ ಪಾಟೀಲ್​ ಸಿ ಶ್ರೇಣಿಯೊಂದಿಗೆ ಮೊದಲ ಬಾರಿಗೆ ವಾರ್ಷಿಕ ಗುತ್ತಿಗೆ ಪಟ್ಟಿಯಲ್ಲಿ ಸ್ಥಾನ ಸಂಪಾದಿಸಿದ್ದಾರೆ.

ಎ, ಬಿ, ಸಿ ಶ್ರೇಣಿ ಗುತ್ತಿಗೆ ಪಡೆದ ಆಟಗಾರ್ತಿಯರು ಕ್ರಮವಾಗಿ ವಾರ್ಷಿಕ 50, 30 ಮತ್ತು 10 ಲಕ್ಷ ರೂ. ವೇತನ ಪಡೆಯಲಿದ್ದಾರೆ. ಕಳಪೆ ಫಾರ್ಮ್​ನಿಂದಾಗಿ ಇತ್ತೀಚೆಗೆ ಭಾರತ ತಂಡದಿಂದ ಹೊರಬಿದ್ದಿರುವ ಹೊರತಾಗಿಯೂ ಆರಂಭಿಕ ಬ್ಯಾಟರ್​ ಶೆಫಾಲಿ ವರ್ಮ ಬಿ ಶ್ರೇಣಿಯ ಗುತ್ತಿಗೆ ಉಳಿಸಿಕೊಂಡಿದ್ದಾರೆ.

ಬಿಸಿಸಿಐ ಈ ಬಾರಿ ಒಟ್ಟು 16 ಆಟಗಾರ್ತಿಯರಿಗೆ ವಾರ್ಷಿಕ ಗುತ್ತಿಗೆ ನೀಡಿದೆ. ಹಿಂದಿನ ಗುತ್ತಿಗೆ ಪಟ್ಟಿಯಲ್ಲಿ ಬಿ ಗ್ರೇಡ್​ನಲ್ಲಿದ್ದ ಆಟಗಾರ್ತಿಯರ ಪೈಕಿ ಕನ್ನಡತಿ ಹಾಗೂ ಎಡಗೈ ಸ್ಪಿನ್ನರ್​ ರಾಜೇಶ್ವರಿ ಗಾಯಕ್ವಾಡ್​ ಈ ಬಾರಿ ಸ್ಥಾನ ಕಳೆದುಕೊಂಡಿದ್ದಾರೆ. ಹರ್ಲೀನ್​ ಡಿಯೋಲ್​, ಮೇನಾ ಸಿಂಗ್​, ದೇವಿಕಾ ವೈದ್ಯ, ಎಸ್​. ಮೇನಾ ಮತ್ತು ಅಂಜಲಿ ಸರ್ವಾನಿ ಗುತ್ತಿಗೆಯಿಂದ ಹೊರಬಿದ್ದಿರುವ ಇತರರು. ಶ್ರೇಯಾಂಕಾ ಜತೆಗೆ ಟಿಟಾಸ್​ ಸಾಧು, ಅರುಂಧತಿ ರೆಡ್ಡಿ, ಉಮಾ ಛೇಟ್ರಿ ಮತ್ತು ಅಮನ್​ಜೋತ್​ ಕೌರ್​ ಈ ಸಲದ ಹೊಸ ಸೇರ್ಪಡೆಯಾಗಿದ್ದಾರೆ.

ಈ ಗುತ್ತಿಗೆ ಪಟ್ಟಿ 2024ರ ಅಕ್ಟೋಬರ್​ 1ರಿಂದ 2025ರ ಸೆಪ್ಟೆಂಬರ್​ 30ರವರೆಗೆ ಅನ್ವಯಿಸಲಿದೆ. ಭಾರತ ತಂಡ ಇನ್ನು ಏಪ್ರಿಲ್​ನಲ್ಲಿ ಶ್ರೀಲಂಕಾ, ದ. ಆಫ್ರಿಕಾ ಒಳಗೊಂಡ ತ್ರಿಕೋನ ಏಕದಿನ ಸರಣಿ ಆಡಲಿದೆ.

ಮಹಿಳಾ ಕ್ರಿಕೆಟಿಗರ ವಾರ್ಷಿಕ ಗುತ್ತಿಗೆ ಪಟ್ಟಿ:

ಎ ಗ್ರೇಡ್​: ಹರ್ಮಾನ್​ಪ್ರೀತ್​ ಕೌರ್​, ಸ್ಮೃತಿ ಮಂದನಾ, ದೀಪ್ತಿ ಶರ್ಮ.

ಬಿ ಗ್ರೇಡ್​: ರೇಣುಕಾ ಠಾಕೂರ್​, ಜೆಮೀಮಾ ರೋಡ್ರಿಗಸ್​, ರಿಚಾ ಘೋಷ್​, ಶೆಫಾಲಿ ವರ್ಮ.

ಸಿ ಗ್ರೇಡ್​: ಯಸ್ತಿಕಾ ಭಾಟಿಯಾ, ರಾಧಾ ಯಾದವ್​, ಶ್ರೇಯಾಂಕಾ ಪಾಟೀಲ್​, ಟಿಟಾಸ್​ ಸಾಧು, ಅರುಂಧತಿ ರೆಡ್ಡಿ, ಅಮನ್​ಜೋತ್​ ಕೌರ್​, ಉಮಾ ಛೇಟ್ರಿ, ಸ್ನೇಹಾ ರಾಣಾ, ಪೂಜಾ ವಸ್ತ್ರಾಕರ್​.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net