ಆಸೀಸ್​ ಕ್ರಿಕೆಟಿಗ ಉಸ್ಮಾನ್​ ಖವಾಜ ಶೂಗಳಿಗೆ ನಿರ್ಬಂಧ ಹೇರಿದ ಐಸಿಸಿ! ಹೀಗಿದೆ ಕಾರಣ...

khawaza shoe
Published on

ಪರ್ತ್​: ಆಸೀಸ್​ ಆರಂಭಿಕ ಉಸ್ಮಾನ್​ ಖವಾಜಗೆ ಪ್ಯಾಲೆಸ್ತೀನ್​ ಬೆಂಬಲಿಸುವ ಬರಹ ಹೊಂದಿರುವ ಶೂಗಳನ್ನು ಧರಿಸಿ ಮೈದಾನಕ್ಕಿಳಿಯಲು ಐಸಿಸಿ ನಿರ್ಬಂಧ ಹೇರಿದೆ. ವಿಶ್ವ ಟೆಸ್ಟ್​ ಚಾಂಪಿಯನ್​ ಆಸ್ಟ್ರೆಲಿಯಾ ಹಾಗೂ ಪ್ರವಾಸಿ ಪಾಕಿಸ್ತಾನ ನಡುವಿನ 3 ಪಂದ್ಯಗಳ ಟೆಸ್ಟ್​ ಸರಣಿಯ ಮೊದಲ ಪಂದ್ಯ ಗುರುವಾರ ಆರಂಭವಾಗಲಿದ್ದು, ಇದರಲ್ಲಿ ಅದೇ ಶೂಗಳೊಂದಿಗೆ ಆಡಲು ಖವಾಜ ಸಿದ್ಧರಾಗಿದ್ದರು. ಆದರೆ ಐಸಿಸಿ ನಡೆಯಿಂದಾಗಿ ಅವರು ನಿರಾಸೆ ಅನುಭವಿಸಿದ್ದಾರೆ.

"ಎಲ್ಲ ಜೀವಗಳು ಸಮಾನ' ಮತ್ತು "ಸ್ವಾತಂತ್ರ್ಯವು ಮಾನವ ಹಕ್ಕು' ಎಂಬ ಸಂದೇಶಗಳನ್ನು ಬರೆದ ಶೂಗಳಿಗೆ "ಕ್ರಿಕೆಟ್​ ಆಸ್ಟ್ರೆಲಿಯಾ' ಅನುಮತಿ ನೀಡಿದ್ದರೂ, ರಾಜಕೀಯ ಸಂದೇಶಗಳನ್ನು ನಿರ್ಬಂಧಿಸುವ ಐಸಿಸಿ ನೀತಿಸಂಹಿತೆಯ ಅನ್ವಯ ಇದಕ್ಕೆ ಅವಕಾಶ ನಿರಾಕರಿಸಲಾಗಿದೆ. ಈ ಬಗ್ಗೆ ಖವಾಜ ಎಕ್ಸ್​​ನಲ್ಲಿ ವಿಡಿಯೋ ಹಂಚಿಕೊಂಡಿದ್ದು, ಐಸಿಸಿ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಖವಾಜ ಪಾಕಿಸ್ತಾನ ಮೂಲದ ಆಟಗಾರರಾಗಿದ್ದು, ಬುಧವಾರ ಅಭ್ಯಾಸದ ವೇಳೆ ಇದೇ ಶೂಗಳನ್ನು ಧರಿಸಿದ್ದರು.

ಏಕದಿನ ವಿಶ್ವಕಪ್​ ವೈಫಲ್ಯದ ಬಳಿಕ ಮೇಜರ್​ ಸರ್ಜರಿಗೆ ಒಳಗಾಗಿರುವ ಪಾಕ್​ ತಂಡ ಹೊಸ ಟೆಸ್ಟ್​ ನಾಯಕ ಶಾನ್​ ಮಸೂದ್​ ಸಾರಥ್ಯದಲ್ಲಿ ಆಸೀಸ್​ ಎದುರು ಮೊದಲ ಬಾರಿಗೆ ಕಣಕ್ಕಿಳಿಯಲಿದೆ. ಅನುಭವಿ ಸ್ಪಿನ್ನರ್​ ನಾಥನ್​ ಲ್ಯಾನ್​ ಟೆಸ್ಟ್​ ಕ್ರಿಕೆಟ್​ನಲ್ಲಿ 500 ವಿಕೆಟ್​ ಪಡೆದ 3ನೇ ಆಸೀಸ್​ ಆಟಗಾರ ಎನಿಸುವ ಮೂಲಕ ಶೇನ್​ ವಾರ್ನ್​ (708) ಹಾಗೂ ಗ್ಲೆನ್​ ಮೆಕ್​ಗ್ರಾತ್​ (563) ಸಾಲಿಗೆ ಸೇರಲು ಸಜ್ಜಾಗಿದ್ದಾರೆ. ಈ ಸಾಧನೆಗೆ ಲ್ಯಾನ್​ ಇನ್ನೂ 4 ವಿಕೆಟ್​ ಕಬಳಿಸಬೇಕಿದೆ. ಟೆಸ್ಟ್​ ಕ್ರಿಕೆಟ್​ನಲ್ಲಿ 500 ವಿಕೆಟ್​ ಕಬಳಿಸಿದ 7 ಬೌಲರ್​ಗಳಲ್ಲಿ ಶೇನ್​ ವಾರ್ನ್​, ಶ್ರೀಲಂಕಾದ ಮುತ್ತಯ್ಯ ಮುರಳೀಧರನ್​, ಭಾರತದ ಅನಿಲ್​ ಕುಂಭ್ಳೆ ಮಾತ್ರ ಸ್ಪಿನ್ನರ್​ಗಳಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net