

Baba Vanga: ಪ್ರಸ್ತುತ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಸಾರ್ವಕಾಲಿಕ ಗರಿಷ್ಠ ದಾಖಲೆ ಮಟ್ಟವನ್ನು ಮೀರಿದೆ. ಅದರಲ್ಲೂ ಚಿನ್ನದ ದರದಲ್ಲಿ ಭಾರೀ ಏರಿಕೆ ಕಂಡುಬಂದಿರುವುದು ಸದ್ಯ ಖರೀದಿದಾರರನ್ನು ಅಚ್ಚರಿಗೆ ದೂಡಿದೆ. ಮುಂದಿನ ದಿನಗಳಲ್ಲಿ ಈ ಬೆಲೆಗಳು ಕೊಂಚ ಇಳಿಕೆ ಕಾಣಬಹುದೇ ವಿನಃ ನಿರೀಕ್ಷಿಸಿದ್ದಷ್ಟು ಕಡಿಮೆಯಾಗುವುದಿಲ್ಲ. ಗೋಲ್ಡ್ ಬೆಲೆಯಲ್ಲಿನ ದಾಖಲೆಯ ಏರಿಕೆಗೂ ಬಾಬಾ ವಂಗಾ ನುಡಿದಿರುವ ಅಂದಿನ ಭವಿಷ್ಯವಾಣಿಗೂ ಸಂಬಂಧವಿದೆ ಎಂಬುದು ಇದೀಗ ಸ್ಪಷ್ಟವಾಗುತ್ತಿದೆ.
ಮುಂದಿನ ವರ್ಷ ಚಿನ್ನದ ಬೆಲೆಗಳು ಹಿಂದಿನ ದಾಖಲೆಗಳನ್ನು ಕನಿಷ್ಠ ಅಂದರೆ ಶೇ.30ರಷ್ಟು ಮುರಿಯಲಿದೆ ಎಂಬ ಮಾತುಗಳು ಜೋರಾಗಿವೆ. ಬಾಬಾ ವಂಗಾ ನೂರಾರೂ ವರ್ಷಗಳ ಹಿಂದೆಯೇ ಪ್ರಕೃತಿ ವಿಸ್ಮಯ, ವಿಕೋಪ ಹಾಗೂ ಇನ್ನಿತರ ವಿಚಾರಗಳಿಗೆ ಸಂಬಂಧಿಸಿದಂತೆ ಬಲವಾದ ಭವಿಷ್ಯಗಳನ್ನು ನುಡಿದಿದ್ದಾರೆ. ಅದರಲ್ಲಿ ಚಿನ್ನದ ಬಗ್ಗೆಯೂ ಹೇಳಿರುವುದು ಸದ್ಯ ಗಮನಾರ್ಹ.
ಬಾಲ್ಕನ್ಸ್ನ ನಾಸ್ಟ್ರಾಡಾಮಸ್ ಎಂದು ಕರೆಯಲ್ಪಡುವ ಬಾಬಾ ವಂಗಾ ಅವರ ಭವಿಷ್ಯವಾಣಿಯಂತಹ ಕೆಲವು ವಿಷಯಗಳು ಈಗ ಮತ್ತೆ ಜಾಗತಿಕವಾಗಿ ಸಂಚಲನ ಮೂಡಿಸುತ್ತಿವೆ. 2025ರಲ್ಲಿ ಚಿನ್ನದ ಬೆಲೆಗಳು ಘಾತೀಯವಾಗಿ ಹೆಚ್ಚುತ್ತಿವೆ ಎಂಬ ಸಂಗತಿ ಅನೇಕರಿಗೆ ತಿಳಿದಿದೆ. ದೀಪಾವಳಿ ಹಬ್ಬ ಕಳೆಯುತ್ತಿದ್ದಂತೆ ಗಣನೀಯವಾಗಿ ಚಿನ್ನದ ಬೆಲೆಗಳು ಕೊಂಚ ಇಳಿಕೆಯತ್ತ ಸಾಗಿದ್ದೇ ಆದರೂ, ಏರಿಕೆ ವೇಳೆ ಕಂಡ ಪ್ರಮಾಣ, ಇಳಿಕೆಯಲ್ಲಿ ಕಾಣಿಸಿಲ್ಲ. 2025 ಕೊನೆಗೊಳ್ಳಲು ಇನ್ನೇನು ಕೆಲವು ದಿನಗಳು ಮಾತ್ರ ಬಾಕಿ ಉಳಿದಿದೆ. ಈ ಸಂದರ್ಭದಲ್ಲಿ, 2026ರಲ್ಲಿ ಚಿನ್ನದ ಬೆಲೆಗಳ ಬಗ್ಗೆ ಭಾರೀ ಚರ್ಚೆಗಳು ಶುರುವಾಗಿವೆ.
2026ರಲ್ಲಿ ಪ್ರಪಂಚದಾದ್ಯಂತ ಚಿನ್ನದ ಬೆಲೆಗಳು ಗಣನೀಯವಾಗಿ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ ಎಂಬ ಸಂಗತಿ ಈಗ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಇದು ಈಗ ಅಂತರರಾಷ್ಟ್ರೀಯ ಚಿನ್ನದ ಮಾರುಕಟ್ಟೆಯ ಜತೆಗೆ ಭಾರತೀಯ ಹೂಡಿಕೆದಾರರ ಗಮನವನ್ನು ಸೆಳೆಯುತ್ತಿದೆ. ಬಾಬಾ ವಂಗಾ ಅವರ ಭವಿಷ್ಯವಾಣಿಯ ಪ್ರಕಾರ, 2026ರಲ್ಲಿ ಜಾಗತಿಕ ಆರ್ಥಿಕತೆಯು ಬಲವಾದ ಬೆದರಿಕೆಯನ್ನು ಎದುರಿಸಲಿದೆ. ಇದರಿಂದಾಗಿ ಚಿನ್ನದ ಬೆಲೆಗಳು ಅನಿರೀಕ್ಷಿತವಾಗಿ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
2026ರಲ್ಲಿ ಜಾಗತಿಕ ಆರ್ಥಿಕತೆಯಲ್ಲಿ ಒಂದು ರೀತಿಯ ದೊಡ್ಡ ಬಿಕ್ಕಟ್ಟು ಅಥವಾ ನಗದು ಬಿಕ್ಕಟ್ಟು ಉಂಟಾಗುತ್ತದೆ ಎಂದು ಬಾಬಾ ವಂಗಾ ತಮ್ಮ ಭವಿಷ್ಯವಾಣಿಗಳಲ್ಲಿ ಉಲ್ಲೇಖಿಸಿದ್ದಾಗಿ ತಿಳಿಸಲಾಗಿದೆ. ಸಾಮಾನ್ಯವಾಗಿ, ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲಿ, ಹೂಡಿಕೆದಾರರು ಸುರಕ್ಷಿತ ಹೂಡಿಕೆಗಳತ್ತ ಮುಖಮಾಡುತ್ತಾರೆ. ಈ ಬಿಕ್ಕಟ್ಟಿನಿಂದಾಗಿ, ಷೇರು ಮಾರುಕಟ್ಟೆ ಮತ್ತು ಇತರ ಸಾಮಾನ್ಯ ಹೂಡಿಕೆಗಳು ಭಾರಿ ಆರ್ಥಿಕ ನಷ್ಟವನ್ನು ಅನುಭವಿಸುವ ಸಾಧ್ಯತೆಯಿದೆ. ಅಂತಹ ಅನಿಶ್ಚಿತತೆಯ ಸಮಯದಲ್ಲಿ ಚಿನ್ನವು ಸುರಕ್ಷಿತ ಹೂಡಿಕೆಯಾಗಿ ಉಳಿದಿದೆ.
ಹೂಡಿಕೆದಾರರು ಭಾರಿ ನಷ್ಟವನ್ನು ತಪ್ಪಿಸಲು ಚಿನ್ನವನ್ನು ಖರೀದಿಸಲು ಪ್ರಾರಂಭಿಸುತ್ತಾರೆ. ಇದರ ಪರಿಣಾಮವಾಗಿ, ಚಿನ್ನದ ಬೇಡಿಕೆ ಇನ್ನಷ್ಟು ಹೆಚ್ಚಾಗಲಿದೆ. ಬೆಲೆಗಳಲ್ಲಿ ಅನಿರೀಕ್ಷಿತ ಭಾರಿ ಏರಿಕೆಯ ಸಾಧ್ಯತೆಯಿದೆ ಎಂದು ಹಣಕಾಸು ವಿಶ್ಲೇಷಕರು ನಂಬುತ್ತಾರೆ. ಅಸಕ್ಮಾತ್ ಬಾಬಾ ವಂಗಾ ಅವರ ಭವಿಷ್ಯವಾಣಿಯು ದಿಟವಾದರೆ ಮತ್ತು ಜಾಗತಿಕ ಆರ್ಥಿಕ ಬಿಕ್ಕಟ್ಟು ಸಂಭವಿಸಿದರೆ, ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಗಳು ದಾಖಲೆಯ ಮಟ್ಟವನ್ನು ತಲುಪುತ್ತವೆ. ಮಾರುಕಟ್ಟೆ ಅಂದಾಜಿನ ಪ್ರಕಾರ, ಮುಂದಿನ ವರ್ಷ ಚಿನ್ನದ ಬೆಲೆಗಳು 10 ಗ್ರಾಂಗೆ 1.62 ಲಕ್ಷ ರೂ.ನಿಂದ 1.82 ಲಕ್ಷ ರೂ.ಗೆ ತಲುಪುವ ನಿರೀಕ್ಷೆಯಿದೆ,(ಏಜೆನ್ಸೀಸ್).