ಕೆಲಸಕ್ಕೆ ಹೋಗದೇ ಎರಡು ಕಂಪನಿಗಳಿಂದ 37.54 ಲಕ್ಷ ರೂ. ಸಂಬಳ ಪಡೆದ ಸರ್ಕಾರಿ ಅಧಿಕಾರಿ ಪತ್ನಿ; ಎಸಿಬಿ ತನಿಖೆಯಲ್ಲಿ ಬೆಳಕಿಗೆ| ACB

ವಿಜಯವಾಣಿ - 2025-10-27T094028.224
Published on

ಜೈಪುರ್: ರಾಜಸ್ಥಾನ ಸರ್ಕಾರಿ ಅಧಿಕಾರಿಯೊಬ್ಬರು ಪತ್ನಿ ಎರಡೂ ಕಂಪನಿಗಳಿಂದ ಒಂದು ದಿನವೂ ಕೆಲಸಕ್ಕೆ ಹೋಗದೇ ಸುಮಾರು ಎರಡು ವರ್ಷಗಳಲ್ಲಿ 37.54 ಲಕ್ಷ ರೂ. ಸಂಬಳ ಪಡೆದ ಪ್ರಕರಣ ಎಸಿಬಿ(ACB) ತನಿಖೆಯಲ್ಲಿ ಬಯಲಿಗೆ ಬಂದಿದೆ ಎಂದು ಸೋಮವಾರ(ಅ. 27) ವರದಿಯಾಗಿದೆ.

ಸರ್ಕಾರಿ ಟೆಂಡರ್‌ಗಳನ್ನು ಪಡೆದ ಎರಡು ಖಾಸಗಿ ಕಂಪನಿಗಳಿಂದ ಈ ಮೊತ್ತವನ್ನು ಲಂಚದ ರೂಪದಲ್ಲಿ ಸ್ವೀಕರಿಸಲಾಗಿದೆ ಎಂದು ಕಂಡುಬಂದಿದೆ. ರಾಜಸ್ಥಾನ ಹೈಕೋರ್ಟ್ ಆದೇಶದ ಮೇರೆಗೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಈ ವಿಷಯದ ಬಗ್ಗೆ ತನಿಖೆ ಆರಂಭಿಸಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ.

ರಾಜ್‌ಕಾಂಪ್ ಇನ್ಫೋ ಸರ್ವಿಸಸ್‌ ಮಾಹಿತಿ ತಂತ್ರಜ್ಞಾನ ಇಲಾಖೆಯ ಜಂಟಿ ನಿರ್ದೇಶಕರಾಗಿ ಕೆಲಸ ಮಾಡುತ್ತಿರುವ ಪ್ರದ್ಯುಮನ್ ದೀಕ್ಷಿತ್ ಅವರ ಪತ್ನಿ ಪೂನಂ ದೀಕ್ಷಿತ್ ಅವರನ್ನು ಸರ್ಕಾರಿ ಟೆಂಡರ್‌ಗಳನ್ನು ಗೆದ್ದಿದ್ದ ಓರಿಯನ್‌ಪ್ರೊ ಸೊಲ್ಯೂಷನ್ಸ್ ಮತ್ತು ಟ್ರೀಜೆನ್ ಸಾಫ್ಟ್‌ವೇರ್ ಲಿಮಿಟೆಡ್ ಎಂಬ ಎರಡು ಖಾಸಗಿ ಕಂಪನಿಗಳಲ್ಲಿ ಉದ್ಯೋಗಿ ಎಂದು ತೋರಿಸಿ ಅಕ್ರಮವಾಗಿ ಸಂಬಳ ಪಡೆದಿದ್ದಾರೆ ಎಂದು ಎಸಿಬಿ ಆರೋಪಿಸಿದೆ.

ಕಂಪನಿಗಳಿಗೆ ಟೆಂಡರ್‌ಗಳನ್ನು ನೀಡಿದ್ದಕ್ಕಾಗಿ ಪ್ರತಿಯಾಗಿ ತನ್ನ ಪತ್ನಿಗೆ ಮಾಸಿಕ ಸಂಬಳ ನೀಡಬೇಕೆಂದು ಅಧಿಕಾರಿ ಪ್ರದ್ಯುಮನ್ ದೀಕ್ಷಿತ್ ಅವರು ಆದೇಶಿಸಿದ್ದಾರೆ ಎನ್ನಲಾಗಿದೆ. ಜನವರಿ 2019 ರಿಂದ ಸೆಪ್ಟೆಂಬರ್ 2020ರವರೆಗೆ, ಈ ಎರಡೂ ಕಂಪನಿಗಳು ಪೂನಂ ದೀಕ್ಷಿತ್ ಅವರ ಐದು ವಿಭಿನ್ನ ಬ್ಯಾಂಕ್ ಖಾತೆಗಳಿಗೆ ಒಟ್ಟು 37,54,405 ರೂ.ಗಳನ್ನು ಸಂಬಳದ ಹೆಸರಿನಲ್ಲಿ ಜಮಾ ಮಾಡಿವೆ.

ಈ ಎರಡು ವರ್ಷಗಳಲ್ಲಿ ಪೂನಂ ದೀಕ್ಷಿತ್ ಅವರು ಒಮ್ಮೆಯೂ ಕಚೇರಿಗಳಿಗೆ ಹೋಗಿಲ್ಲ. ಓರಿಯನ್‌ಪ್ರೊ ಕಂಪನಿಯ ಉದ್ಯೋಗಿಯಾಗಿ ಸಂಬಳ ಪಡೆಯುವಾಗ, ಟ್ರೀಜೆನ್ ಸಾಫ್ಟ್‌ವೇರ್ ಕಂಪನಿಯಿಂದ 'ಫ್ರೀಲ್ಯಾನ್ಸಿಂಗ್' ಹೆಸರಿನಲ್ಲಿ ಪಾವತಿಗಳನ್ನು ಪಡೆದಿದ್ದಾರೆ. ಅವರು ಕಚೇರಿಗೆ ಹೋಗದಿದ್ದರೂ ಅವರ ಉಪಸ್ಥಿತಿಯನ್ನು ತೋರಿಸುವ ನಕಲಿ ಹಾಜರಾತಿ ವರದಿಗಳನ್ನು ಅವರ ಪತಿ ಪ್ರದ್ಯುಮನ್ ದೀಕ್ಷಿತ್ ಸ್ವತಃ ಅನುಮೋದಿಸಿದ್ದಾರೆ ಎಂದು ತನಿಖೆಯಲ್ಲಿ ಕಂಡು ಬಂದಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net