

ಲಖನೌ: ಗಂಡ-ಹೆಂಡತಿ ಜಗಳ ಉಂಡುಮಲಗೋ ತನಕ ಎಂದು ಹೇಳುತ್ತಾರೆ. ಆದರೆ ಉತ್ತರಪ್ರದೇಶದ ಶಹಜಹಾನ್ಪುರದಲ್ಲಿ ಗಂಡನನ್ನು ಇಟ್ಟಿಗೆಯಿಂದ ಹೊಡೆದು ಕೊಂದಿರುವ ಮಹಿಳೆ, ಆತ ಸತ್ತರೂ ಬಿಡದೆ ತಲೆಯನ್ನು ಜಜ್ಜಿ ವಿಕೃತಿ ಮೆರೆದಿದ್ದಾಳೆ. ಈ ಘಟನೆ ಇದೀಗ ವೈರಲ್ ಆಗಿದೆ.
ಸತ್ಯಪಾಲ್ (40) ಮತ್ತು ಗಾಯತ್ರಿ ದೇವಿ (39) ಶಹಜಹಾನ್ಪುರದ ಹಟೌಡಾ ಗ್ರಾಮದಲ್ಲಿ ವಾಸಿಸುತ್ತಿದ್ದರು. 20 ವರ್ಷದ ಹಿಂದೆ ಇವರು ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳು. ಪುತ್ರಿ ಬಿಎ ಓದುತ್ತಿದ್ದರೆ, ಪುತ್ರ ಇಂಟರ್ ಓದುತ್ತಿದ್ದಾನೆ. ಸತ್ಯಪಾಲ್ಗೆ ಕುಡಿಯುವ ಚಟವಿದ್ದು, ಮಾಂಸಾಹಾರ ತಯಾರಿಸಿಕೊಡುವಂತೆ ನಿತ್ಯ ಪತ್ನಿಗೆ ಒತ್ತಾಯಿಸುತ್ತಿದ್ದ. ಆದರೆ ಗಾಯತ್ರಿ ಸಂಪೂರ್ಣ ಸಸ್ಯಾಹಾರಿ. ಆಕೆಗೆ ನಾನ್ ವೆಜ್ ಇಷ್ಟವಾಗದು. ಪತಿ ಇದನ್ನು ಕೇಳುವವನಲ್ಲ. ಈ ಹಿನ್ನೆಲೆಯಲ್ಲಿ ಗುರುವಾರವೂ ರಾತ್ರಿ ಕುಡಿದು ಬಂದು ಮಾಂಸಾಹಾರ ಮಾಡಲು ಜಗಳವಾಡಿದ್ದಾನೆ.
ಆದರೆ ಗಾಯತ್ರಿ ತಿರುಗಿಬಿದ್ದು, ಪತಿಯನ್ನು ಥಳಿಸಲು ಮುಂದಾಗಿದ್ದಾಳೆ. ಹೆದರಿ ಓಡಿ ಹೋಗುತ್ತಿದ್ದ ಪತಿಯನ್ನು ಅಟ್ಟಾಡಿಸಿಕೊಂಡುಹೋಗಿ ಇಟ್ಟಿಗೆಯಿಂದ ಹಲ್ಲೆ ಮಾಡಿದ್ದಾಳೆ. ಇದರಿಂದ ಕೆಳಗೆ ಬಿದ್ದ ಆತ ಮೃತಪಟ್ಟಿದ್ದಾನೆ. ಆದರೆ ಇಷ್ಟಕ್ಕೇ ಬಿಡದ ಆಕೆ ಆತನ ತಲೆ ಹೊಡೆದು ಮೆದುಳು ಮತ್ತು ರಕ್ತವನ್ನು ಹೊರತೆಗೆದು ಹಿಂಸಾತ್ಮಕವಾಗಿ ವರ್ತಿಸಿದ್ದಾಳೆ.
ಈ ಭೀಕರ ದೃಶ್ಯ ನೋಡಿ ಕೆಲವರು ಪೊಲೀಸರಿಗೆ ಮಾಹಿತಿ ನೀಡಿದರು. ಪೋಲೀಸರು ಬಂದಾಗಲೂ ಆಕೆ ಪತಿ ತಲೆಯನ್ನು ಜಜ್ಜುತ್ತ, ಮೃತದೇಹದ ಮೇಲೆ ಕುಳಿತಿದ್ದಳು. ಪೊಲೀಸರು ಕಡೆಗೆ ಆಕೆಯನ್ನು ಬಂಧಿಸಿದ್ದಾರೆ.
ಗಾಯತ್ರಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವಂತೆ ತೋರುತ್ತದೆ. ಈ ಹಿಂದೆ ಆಕೆಗೆ ಚಿಕಿತ್ಸೆ ನೀಡಲಾಗಿತ್ತು ಎಂದು ಸ್ಥಳೀಯರು ಹೇಳುತ್ತಾರೆ. ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.