ಗಂಡನನ್ನು ತೊರೆದು ಬಂದವಳ ಬದುಕಲ್ಲಿ ದುರಂತ! ಇಷ್ಟಪಟ್ಟು ಮದುವೆಯಾದವನ ಜತೆ ಹೆಣವಾದಳು

suicide lovers
Published on

ಕೋಲಾರ: ಆಕೆಯದ್ದು ಮದುವೆ ಮೀರಿದ ಪ್ರೇಮ. ತಂದೆ-ತಾಯಿ, ಗಂಡ-ಮಗಳನ್ನೂ ದಾಟಿ ಪ್ರಿಯಕರನ ಜತೆ ಎರಡನೇ ಮದುವೆಯಾಗಿದ್ದಳು. ಆದರೀಗ ಇಷ್ಟಪಟ್ಟು ಮದುವೆಯಾದ ಗಂಡನ ಜತೆ ಆಕೆಯೂ ಕೃಷಿಹೊಂಡಕ್ಕೆ ಬಿದ್ದು ಪ್ರಾಣ ಬಿಟ್ಟಿದ್ದಾಳೆ!

ಬಂಗಾರಪೇಟೆ ತಾಲೂಕಿನ ಮುಗಳಬೆಲೆ ಗ್ರಾಮದ ದಂಪತಿಯ ಪ್ರೇಮ ಕಥೆ ಶುಕ್ರವಾರ ದುರಂತ ಅಂತ್ಯ ಕಂಡಿದೆ. ಸುರೇಶ್​(28) ಮತ್ತು ರೂಪಾ(26) ಮೃತ ದಂಪತಿ. ಮಾಲೂರು ತಾಲೂಕಿನ ದ್ಯಾಪಸಂದ್ರ ಗ್ರಾಮದ ರೂಪಾ ಈ ಹಿಂದೆ ಬಂಗಾರಪೇಟೆ ತಾಲೂಕಿನ ಕಾರಹಳ್ಳಿಯ ಯುವಕನೊಂದಿಗೆ 8 ವರ್ಷದ ಹಿಂದೆ ಮದುವೆಯಾಗಿದ್ದಳು. ಈ ದಂಪತಿಗೆ ಒಂದು ಹೆಣ್ಣುಮಗು ಕೂಡ ಇತ್ತು. ಹೀಗಿರುವಾಗಲೇ ತನ್ನ ಗಂಡ ಸರಿ ಇಲ್ಲ ಎಂದು ನೊಂದುಕೊಂಡಿದ್ದ ರೂಪಾಗೆ ನಿತ್ಯ ಕೆಲಸಕ್ಕೆ ಹೋಗಿಬರುತ್ತಿದ್ದ ವೇಳೆ ರೈಲಿನಲ್ಲಿ ಮಾದಮಂಗಲ ಗ್ರಾಮದ ಗಾರೆಕೆಲಸಗಾರ ಸುರೇಶನ ಪರಿಚಯವಾಗಿತ್ತು. ಪರಿಚಯ ಪ್ರೇಮವಾಗಿ ತಿರುಗಿ, ಒಂದೂವರೆ ವರ್ಷದ ಹಿಂದೆ ಗಂಡನನ್ನು ಬಿಟ್ಟು ಬಂದ ರೂಪಾ ಸುರೇಶನೊಂದಿಗೆ ಮದುವೆಯಾಗಿದ್ದಳು.

ಕಳೆದ ಹದಿನೈದು ದಿನದ ಹಿಂದೆ ತವರು ಮನೆಗೆ ರೂಪಾ ಹೋಗಿದ್ದಳು. ಗುರುವಾರ ಮದ್ಯಾಹ್ನ ಪತ್ನಿಯನ್ನು ಕರೆದುಕೊಂಡು ಬರುವುದಾಗಿ ಹೋಗಿದ್ದ ಸುರೇಶ್​ ಕೂಡ ಮನೆಗೆ ರಾತ್ರಿ ವಾಪಸ್​ ಬಂದಿರಲಿಲ್ಲ. ಆದ್ರೆ ಶುಕ್ರವಾರ ಬೆಳಗ್ಗೆ ಮುಗಳಬೆಲೆ ಗ್ರಾಮದ ಕೃಷಿಹೊಂಡದಲ್ಲಿ ಇಬ್ಬರೂ ಒಂದೇ ವೇಲಿನಲ್ಲಿ ಕಟ್ಟಿಕೊಂಡು ಕೃಷಿಹೊಂಡಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇತ್ತೀಚೆಗೆ ಸುರೇಶ್​ ಮತ್ತು ರೂಪಾ ನಡುವೆ ಸಾಂಸಾರಿಕ ಜಗಳದಿಂದಾಗಿ ರೂಪಾ ತಮ್ಮ ತವರು ಮನೆಗೆ ಹೋಗಿದ್ದಳು ಎನ್ನಲಾಗಿದೆ. ಪ್ರೀತಿಸಿ ಮದುವೆಯಾದ ರೂಪಾ ಹಾಗೂ ಸುರೇಶ್ ಸರಿಯಾದ​ ಹೊಂದಾಣಿಕೆ ಇಲ್ಲದೆ, ಅಂದುಕೊಂಡಂತೆ ಬದುಕಲಾಗದೆ ಆತ್ಮಹತ್ಯೆ ಮೂಲಕ ಬದುಕಿಗೆ ವಿದಾಯ ಹೇಳಿದ್ದು ಮಾತ್ರ ದುರಂತ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net