ವಿಜಯವಾಣಿ ಸುದ್ದಿಜಾಲ, ಹುಬ್ಬಳ್ಳಿ: ಐದು ವರ್ಷದ ಮಗುವನ್ನು ಹೊತ್ತೊಯ್ದು ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ ಪಾತಕಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಗುಂಡೇಟು ಹೊಡೆದ ಹುಬ್ಬಳ್ಳಿಯ ಅಶೋಕನಗರ ಠಾಣೆ ಪೊಲೀಸರ ಕಾರ್ಯಕ್ಕೆ ಇದೀಗ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಭಾನುವಾರ ಮಧ್ಯಾಹ್ನ ಬಾಲಕಿಯನ್ನು ಕೊಂದ ಬಿಹಾರದ ರಿತೇಶಕುಮಾರ (35) ಸ್ಥಳ ಪರಿಶೀಲನೆ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಮುಂದಾದಾಗ ಪೊಲೀಸರು ಪ್ರಶಸ್ತ ಕೆಲಸ ಮಾಡಿದ್ದಾರೆ. ಈ ಮೂಲಕ ಜನಾಕ್ರೋಶಕ್ಕೆ ಸ್ಪಂದಿಸಿದ್ದಾರೆ ಎಂಬ ಮಾತು ಕೇಳಿಬರುತ್ತಿವೆ. ಇದೇ ರೀತಿ ಗ್ಯಾಂಗ್ರೇಪ್ ಆರೋಪಿಗಳನ್ನು ಎನ್ಕೌಂಟರ್ ಮಾಡಿದ್ದ ಹುಬ್ಬಳ್ಳಿ ಮೂಲದ ಐಪಿಎಸ್ ಅಧಿಕಾರಿ ತೆಲಂಗಾಣದಲ್ಲಿರುವ ವಿಶ್ವನಾಥ ಸಜ್ಜನರ ಅವರ ಕಾರ್ಯವನ್ನೂ ಜನರು ನೆನಪಿಸಿಕೊಳ್ಳುತ್ತಿದ್ದಾರೆ.
ಅತ್ಯಾಚಾರ, ಕೊಲೆ ಮಾಡಿದವರು ಬಂಧನಕ್ಕೀಡಾದರೂ ನಂತರ ಜಾಮೀನಿನ ಮೇಲೆ ಹೊರಬಂದು ರಾಜಾರೋಷವಾಗಿ ತಿರುಗುವುದಿದೆ. ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದರೆ ಪ್ರಕ್ರಿಯೆಗಳು ನಡೆದು ಅಪರಾಧ ಸಾಬೀತಾಗಲು ಸಮಯ ತಗಲುತ್ತದೆ. ಆದರೆ ರಿತೇಶಕುಮಾರ ಬಾಲಕಿಯನ್ನು ಎತ್ತಿಕೊಂಡು ಹೋದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿರುವುದೇ ಸಾಕ್ಷಿ. ಆತನನ್ನು ನಮಗೆ ಒಪ್ಪಿಸಿ ಎಂದು ಸಾರ್ವಜನಿಕರು ಪಕ್ಷಾತೀತವಾಗಿ ಠಾಣೆ ಎದುರು ಜಮಾಯಿಸಿ ಒತ್ತಾಯಿಸಿದ್ದರು. ಆದರೆ, ಪೊಲೀಸರು ತಾಳ್ಮೆ ಪ್ರದರ್ಶಿಸಿದ್ದರು. ಬಿಹಾರದ ರಿತೇಶಕುಮಾರ ಹುಬ್ಬಳ್ಳಿ ನಗರ ಹೊರವಲಯದ ತಾರಿಹಾಳದಲ್ಲಿ ಉಳಿದುಕೊಂಡಿದ್ದು ವಿಚಾರಣೆ ವೇಳೆ ತಿಳಿದಿತ್ತು.
ಹೀಗಾಗಿ ಪೊಲೀಸರು ಸ್ಥಳ ಪರಿಶೀಲನೆಗೆ ಅಲ್ಲಿಗೆ ಕರೆದೊಯ್ದಿದ್ದರು. ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ ಪಾತಕಿ ರಿತೇಶಕುಮಾರ ಸ್ಥಳ ಪರಿಶೀಲನೆ ವೇಳೆ ಪೊಲೀಸರೊಂದಿಗೆ ಸಹಕರಿಸದೆ ಹಲ್ಲೆಗೆ ಮುಂದಾಗಿದ್ದ. ಪಿಎಸ್ಐ ಅನ್ನಪೂರ್ಣ ಆರ್.ಎಂ. ಎಚ್ಚರಿಕೆ ನೀಡಲು ಗಾಳಿಯಲ್ಲಿ ಗುಂಡು ಹಾರಿಸಿದ್ದಕ್ಕೂ ಆತ ಜಗ್ಗದಿದ್ದಾಗ ಕಾಲಿಗೆ ಗುಂಡು ಹೊಡೆದರು. ಆದರೂ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಹೊಡೆದ ಗುಂಡು ಬೆನ್ನಿಗೆ ನಾಟಿತ್ತು.
ಅತ್ಯಾಚಾರ ದೃಢ: ಬಾಲಕಿ ಮೇಲೆ ಕೃತ್ಯ ನಡೆದಿರುವುದನ್ನು ಹುಬ್ಬಳ್ಳಿಯ ಕೆಎಂಸಿಆರ್ಐನ ಪೋಸ್ಟ್ ಮಾರ್ಟಂ ವರದಿ ದೃಢ ಪಡಿಸಿರುವುದಾಗಿ ತಿಳಿದುಬಂದಿದೆ. ಇಲ್ಲಿಯ ವಿಜಯನಗರದ ಪಾಳುಬಿದ್ದ ಕೊಠಡಿಯಲ್ಲಿ ಪೈಶಾಚಿಕ ಕೃತ್ಯ ಎಸಗಿರಬಹುದು ಎನ್ನಲಾಗುತ್ತಿದೆ. ಬಾಲಕಿ ಚೀರಾಡಿದ್ದರಿಂದ ಕತ್ತು ಹಿಸುಕಿ ಕೊಲೆ ಮಾಡಿ ಪರಾರಿಯಾಗಲು ಯತ್ನಿಸಿದಾಗ ಸ್ಥಳೀಯರು ಸುತ್ತುವರಿದಿದ್ದರಿಂದ ಸಿಕ್ಕಿಬಿದ್ದಿದ್ದ.
ಅಂತ್ಯ ಸಂಸ್ಕಾರ: ತಾಲೂಕು ದಂಡಾಧಿಕಾರಿ ಕಲಗೌಡ ಪಾಟೀಲ ನೇತೃತ್ವದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಯಿತು. ದೇವಾಂಗಪೇಟೆ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಿತು. ರಿತೇಶಕುಮಾರ ಮರಣೋತ್ತರ ಪರೀಕ್ಷೆಯನ್ನು ನ್ಯಾಯಾಧೀಶರ ಸಮ್ಮುಖದಲ್ಲಿ ನೆರವೇರಿಸಲಾಗಿದೆ. ಶವವನ್ನು ನೋಡಲು ಸೋಮವಾರ ಸಂಜೆವರೆಗೆ ಸಂಬಂಧಿಕರ್ಯಾರೂ ಬಂದಿಲ್ಲ. ಹಾಗಾಗಿ ಹು-ಧಾ ಮಹಾನಗರ ಪಾಲಿಕೆಗೆ ಮೃತದೇಹವನ್ನು ಹಸ್ತಾಂತರ ಮಾಡಲಾಯಿತು. ಆತನ ಕುಟುಂಬದವರು ಬಾರದೇ ಇದ್ದರೆ ಪಾಲಿಕೆಯಿಂದ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ರಿತೇಶಕುಮಾರ ಯಾವಾಗ ಹುಬ್ಬಳ್ಳಿಗೆ ಬಂದಿದ್ದ? ಎಲ್ಲಿ ಕೆಲಸ ಮಾಡುತ್ತಿದ್ದ ಎಂಬ ಮಾಹಿತಿ ತಿಳಿದುಬಂದಿಲ್ಲ.
ಸಚಿವರ ಭೇಟಿ: ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಕೆಎಂಸಿಆರ್ಐಗೆ ಸೋಮವಾರ ಭೇಟಿ ನೀಡಿ, ಗಾಯಗೊಂಡಿರುವ ಪಿಎಸ್ಐ ಅನ್ನಪೂರ್ಣ ಆರ್.ಎಂ., ಪೇದೆಗಳಾದ ಯಶವಂತ ಮೊರಬ, ವೀರೇಶ ಅವರ ಆರೋಗ್ಯ ವಿಚಾರಿಸಿದರು. ನಂತರ ಶವಾಗಾರಕ್ಕೆ ತೆರಳಿ ಬಾಲಕಿಯ ಮೃತದೇಹ ವೀಕ್ಷಿಸಿ ಪೊಲೀಸರಿಂದ ಮಾಹಿತಿ ಪಡೆದರು
ಗುಂಡು ಹೊಡೆದವರು ಮಹಿಳಾ ಎಸ್ಐ
ರಿತೇಶಕುಮಾರನ ಕತೆ ಮುಗಿಸಿದ ಅಶೋಕನಗರ ಠಾಣೆ ಪಿಎಸ್ಐ ಅನ್ನಪೂರ್ಣಾ ಆರ್.ಎಂ. ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಗುಜನಟ್ಟಿ ಗ್ರಾಮದವರು. ರೈತಾಪಿ ಕುಟುಂಬದಲ್ಲಿ ಬೆಳೆದ ಇವರು, ಎಂಎಸ್ಸಿ ಪದವೀಧರೆ. 2018ನೇ ಬ್ಯಾಚ್ನಲ್ಲಿ ಪಿಎಸ್ಐ ಆಗಿ ನೇಮಕವಾಗಿದ್ದಾರೆ. ತಂದೆಯನ್ನು ಕಳೆದುಕೊಂಡು ತಾಯಿ ನೆರಳಲ್ಲಿ ಬೆಳೆದಿರುವ ಅನ್ನಪೂರ್ಣಾ, ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ ಪದವಿ ಪಡೆದು, ಬೆಂಗಳೂರಿನ ಜಿಕೆವಿಕೆಯಲ್ಲಿ ಎಂಎಸ್ಸಿ ಪದವಿಯನ್ನು ಚಿನ್ನದ ಪದಕದೊಂದಿಗೆ ಪಡೆದಿದ್ದಾರೆ.
ಸ್ಥಳ ಪರಿಶೀಲಿಸಿದ ಎನ್. ಶಶಿಕುಮಾರ
ರಿತೀಶಕುಮಾರ ಪೊಲೀಸರ ಗುಂಡಿಗೆ ಬಲಿಯಾಗಿರುವ ತಾರಿಹಾಳ-ರಾಯನಾಳ ರಸ್ತೆಯಲ್ಲಿರುವ ಸ್ಥಳವನ್ನು ಪೊಲೀಸ್ ಆಯುಕ್ತ ಎನ್.ಶಶಿಕುಮಾರ ಪರಿಶೀಲಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಆರೋಪಿ ರಿತೇಶ ರಾತ್ರಿಯನ್ನು ಇದೇ ಜಾಗದಲ್ಲಿ ಕಳೆಯುತ್ತಿದ್ದ. ಹೆಚ್ಚಿನ ಮಾಹಿತಿ ಕೊಡುವುದಾಗಿ ಇಲ್ಲಿಗೆ ಪೊಲೀಸರನ್ನು ಕರೆತಂದಿದ್ದ. ಸ್ಥಳಕ್ಕೆ ಬಂದ ನಂತರ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಅನಿವಾರ್ಯವಾಗಿ ಫೈರಿಂಗ್ ಮಾಡಲಾಯಿತು. ಆತನ ಕುಟುಂಬದವರ ಪತ್ತೆಗಾಗಿ ಒಂದು ತಂಡವನ್ನು ಬಿಹಾರಕ್ಕೆ ಕಳುಹಿಸಲಾಗಿದೆ. ಈ ಆರೋಪಿ ಬೇರೆ ಸ್ಥಳದಲ್ಲಿಯೂ ಉಳಿದುಕೊಂಡಿರುವ ಮಾಹಿತಿ ಲಭಿಸಿದೆ. ವಿವಿಧ ಠಾಣೆಗಳಿಗೆ ಮಾಹಿತಿ ಕೊಡಲಾಗಿದೆ ಎಂದು ವಿವರಿಸಿದರು.
ರಿತೇಶ ಮಾದಕ ವ್ಯಸನಿ?
ಮಾದಕ ವ್ಯಸನಿಯಾಗಿದ್ದ ರಿತೇಶಕುಮಾರ, ಅದೇ ಗುಂಗಿನಲ್ಲಿ ಕೊಲೆ ಮಾಡಿರಬಹುದು ಎಂದು ಅನುಮಾನಿಸಲಾಗುತ್ತಿದೆ. ಪೊಲೀಸರು ಆತನನ್ನು ವಶಕ್ಕೆ ಪಡೆದಾಗಿನಿಂದಲೂ ಮತ್ತಿನಲ್ಲಿ ತೇಲಾಡುತ್ತಿದ್ದ. ಮಾದಕ ವ್ಯಸನಕ್ಕೂ ಕೊಲೆಗೂ ಲಿಂಕ್ ವ್ಯಕ್ತವಾಗುತ್ತಿದೆ. ಮರಣೋತ್ತರ ಪರೀಕ್ಷೆಯ ವಿವರವಾದ ವರದಿ ಬರಬೇಕಿದ್ದು, ಆತ ಮಾದಕ ವ್ಯಸನಿಯಾಗಿದ್ದ ಎನ್ನುವುದು ಅಧಿಕೃತವಾಗಿ ಖಾತ್ರಿಯಾಗಬೇಕಿದೆ.
ಮನುಷ್ಯನ ಈ ರೀತಿಯ ಮನಸ್ಥಿತಿ ತಲೆತಗ್ಗಿಸುವಂತಿದೆ. ಸೈಕೋಪಾತ್ಗಳು ಈ ರೀತಿಯ ಕೃತ್ಯ ಮಾಡುತ್ತಾರೆ. ಈ ನಿಟ್ಟಿನಲ್ಲಿ ಸಾಮಾಜಿಕ ಜವಾಬ್ದಾರಿ ಅಗತ್ಯವಿದೆ. ಮೃತ ಬಾಲಕಿ ಕುಟುಂಬಕ್ಕೆ ಸರ್ಕಾರದಿಂದ 10 ಲಕ್ಷ ರೂ. ಕೊಡಲು ಮುಖ್ಯಮಂತ್ರಿಗೆ ಮನವಿ ಮಾಡುತ್ತೇನೆ.
| ಸಂತೋಷ ಲಾಡ್, ಜಿಲ್ಲಾ ಉಸ್ತುವಾರಿ ಸಚಿವ