

ನವದೆಹಲಿ: 17ನೇ ಆವೃತ್ತಿ ಐಪಿಎಲ್ಗಾಗಿ ಈಗಾಗಲೇ ಬಿಸಿಸಿಐ ಸಿದ್ಧತೆಗಳನ್ನು ಆರಂಭಿಸಿದ್ದು, ಫ್ರಾಂಚೈಸಿಗಳು ತಯಾರಿ ಆರಂಭಿಸಿವೆ. ಈ ನಡುವೆ ಆಟಗಾರರ ಗಾಯದ ಸಮಸ್ಯೆ ಫ್ರಾಂಚೈಸಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಬದಲಿ ಆಟಗಾರರ ಆಯ್ಕೆಯಲ್ಲಿ ತಂಡಗಳು ನಿರತವಾಗಿವೆ.
ಇದೀಗ ಕೇಳಿ ಬಂದಿರುವ ಮಾಹಿತಿ ಪ್ರಕಾರ ಗಾಯದ ಸಮಸ್ಯೆಯಿಂದಾಗಿ ಐಪಿಎಲ್ನಿಂದ ಹೊರಬಿದ್ದಿರುವ ಇಂಗ್ಲೆಂಡ್ ವೇಗಿ ಮಾರ್ಕ್ ವುಡ್ ಬದಲಿಗೆ ವೆಸ್ಟ್ ಇಂಡೀಸ್ನ ಶಮರ್ ಜೋಸೆಫ್ ಲಖನೌ ಸೂಪರ್ಜೈಂಟ್ಸ್ ಕೂಡಿಕೊಂಡಿದ್ಧಾರೆ ಎಂದು ತಿಳಿದು ಬಂದಿದೆ. ಆದರೆ, ಈ ವೇಗಿ ಲಖನೌ ತಂಡ ಕೂಡಿಕೊಳ್ಳುತ್ತಿರುವುದರಿಂದ ಆರ್ಸಿಬಿ ಪಾಲಿಗಿದ್ದ ಸುವರ್ಣಾವಕಾಶ ಕೈತಪ್ಪಿದೆ ಎಂದು ಕ್ರೀಡಾ ಪಂಡಿತರು ಅಭಿಪ್ರಾಯಪಟ್ಟಿದ್ಧಾರೆ.
ಆಸ್ಟ್ರೇಲಿಯಾ ಹಾಗೂ ವೆಸ್ಟ್ ಇಂಡೀಸ್ ನಡುವೆ ನಡೆದ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಪಂದ್ಯವನ್ನು ವಿಂಡೀಸ್ ಪಡೆ ಗೆಲ್ಲುವಲ್ಲಿ ಶಮರ್ ಜೋಸೆಫ್ ಪ್ರಮುಖ ಪಾತ್ರವಹಿಸಿದ್ದರು. ಎರಡನೇ ಇನ್ನಿಂಗ್ಸ್ನಲ್ಲಿ 7 ವಿಕೆಟ್ ಕಬಳಿಸಿದ್ದ ಜೋಸೆಫ್, ಗಬ್ಬಾದಲ್ಲಿ ವಿಂಡೀಸ್ಗೆ ಐತಿಹಾಸಿಕ ಗೆಲುವು ತಂದುಕೊಟ್ಟಿದ್ದರು.
ಶಮರ್ರಗೆ ಐಪಿಎಲ್ನ ಹಲವು ಫ್ರಾಂಚೈಸಿಗಳು ಗಾಳ ಹಾಕುತ್ತಿವೆ ಎಂದು ಈ ಹಿಂದೆ ವರದಿಯಾಗಿತ್ತು. ಅದರಲ್ಲಿ ಆರ್ಸಿಬಿ ತಂಡವೂ ಸೇರಿದೆ ಎಂಬ ಸುದ್ದಿಯೂ ವ್ಯಾಪಕವಾಗಿ ಕೇಳಿ ಬಂದಿತ್ತು. ಆದರೀಗ ಯುವ ಮಾರಕ ವೇಗಿಯನ್ನು ತನ್ನ ಬತ್ತಳಿಕೆಗೆ ಹಾಕಿಕೊಳ್ಳುವಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ ಯಶಸ್ವಿಯಾಗಿದೆ.
ಮೊದಲ ಬಾರಿಗೆ ಐಪಿಎಲ್ ಲೋಕಕ್ಕೆ ಕಾಲಿಟ್ಟಿರುವ ಶಮರ್ ಜೋಸೆಫ್ರನ್ನು ಲಕ್ನೋ ಫ್ರಾಂಚೈಸಿ 3 ಕೋಟಿ ರೂ.ಗೆ ಖರೀದಿಸಿದೆ. ಇದಕ್ಕೆ ಸಂಬಂಧಿಸಿದ ಪತ್ರಿಕಾ ಪ್ರಕಟಣೆಯನ್ನು ಐಪಿಎಲ್ ತನ್ನ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಹಂಚಿಕೊಂಡಿದೆ.
ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕೇವಲ ಎರಡು ಟೆಸ್ಟ್ ಪಂದ್ಯಗಳನ್ನು ಆಡಿರುವ ಶಮರ್ ಜೋಸೆಫ್ ಕ್ರಿಕೆಟ್ ಲೋಕದಲ್ಲಿ ಸಂಚಲನ ಮೂಡಿಸಿದ್ದು. ಆಡಿದ ಎರಡು ಟೆಸ್ಟ್ಗಳಲ್ಲಿ 13 ವಿಕೆಟ್ ಪಡೆದಿದ್ಧಾರೆ. ಇದನ್ನು ಹೊರತುಪಡಿಸಿ ಜೋಸೆಫ್, 7 ಪ್ರಥಮ ದರ್ಜೆ ಪಂದ್ಯಗಳಲ್ಲಿ 34 ವಿಕೆಟ್ ಪಡೆದಿದ್ದಾರೆ.