More

    ಕೊನೇ ಎಸೆತದಲ್ಲಿ ರಿಂಕು ಸಿಂಗ್​ ಸಿಡಿಸಿದ ಸಿಕ್ಸರ್​ ವ್ಯರ್ಥವಾಗಿದ್ದೇಕೆ? ಗೆಲುವಿನ ಸಿಕ್ಸರ್​ಗೆ “ನೋ” ಎಂದ ಅಂಪೈರ್​!

    ನವದೆಹಲಿ: ಗುರುವಾರ ನಡೆದ ಐದು ಪಂದ್ಯಗಳ ಟಿ20 ಸರಣಿಯ ಮೊದಲನೇ ಪಂದ್ಯದಲ್ಲಿ ಆತಿಥೇಯ ಭಾರತ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ 2 ವಿಕೆಟ್​ಗಳ ಭರ್ಜರಿ ಗೆಲುವಿನೊಂದಿಗೆ 1-0 ಅಂತರದಲ್ಲಿ ಮುನ್ನೆಡೆ ಸಾಧಿಸಿದೆ. ಗುರಿ ಬೆನ್ನತ್ತಿದ ಭಾರತಕ್ಕೆ ಒಂದು ಎಸೆತಕ್ಕೆ ಒಂದು ರನ್​ ಬೇಕಿರುವಾಗ ಯುವ ಎಡಗೈ ಆಟಗಾರ ರಿಂಕು ಸಿಂಗ್​ ಸಿಕ್ಸರ್​ ಸಿಡಿಸಿದರು. ಆದರೆ, ಸಿಕ್ಸರ್​ ಅನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ. ಅದಕ್ಕೆ ಕಾರಣ ಏನು ಎಂದು ತಿಳಿದುಕೊಳ್ಳುವ ಕುತೂಹಲವಿದ್ದರೆ ಮುಂದೆ ಓದಿ.

    ನಿನ್ನೆ (ನ.23) ವಿಶಾಖಪಟ್ಟಣದ ಡಾ. ವೈ.ಎಸ್​. ರಾಜಶೇಖರ್​ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟ್​ ಮಾಡಿ ಆಸ್ಟ್ರೇಲಿಯಾ, ಜೋಶ್​ ಇಂಗ್ಲಿಸ್​ (110 ರನ್​, 50 ಎಸೆತ, 11 ಬೌಂಡರಿ, 8 ಸಿಕ್ಸರ್​)​ ಅಬ್ಬರದ ಶತಕದ ನೆರವಿನಿಂದ 20 ಓವರ್​ಗಳಲ್ಲಿ 3 ವಿಕೆಟ್​ ನಷ್ಟಕ್ಕೆ 208 ರನ್​ಗಳ ಬೃಹತ್​ ಮೊತ್ತವನ್ನು ಕಲೆಹಾಕಿತು.

    ಗುರಿ ಬೆನ್ನತ್ತಿದ ಟೀಮ್​ ಇಂಡಿಯಾ, ಸೂರ್ಯಕುಮಾರ್​ ಯಾದವ್​ (80 ರನ್​, 42 ಎಸೆತ, 9 ಬೌಂಡರಿ, 4 ಸಿಕ್ಸರ್​) ಮತ್ತು ಇಶಾನ್​ ಕಿಶಾನ್​ (58 ರನ್​, 39 ಎಸೆತ, 2 ಬೌಂಡರಿ, 5 ಸಿಕ್ಸರ್​) ಅವರ ಅಮೋಘ ಅರ್ಧಶತಕಗಳ ನೆರವಿನಿಂದ ಆಸೀಸ್​ ಗುರಿಯನ್ನು ಮುಟ್ಟಿತು. ಆದಾಗ್ಯೂ ಸೂರ್ಯಕುಮಾರ್​ ಮತ್ತು ಇಶಾನ್​ ಔಟಾದ ಬಳಿಕ ಕೊನೆಯಲ್ಲಿ ಅಬ್ಬರಿಸಿದ ರಿಂಕು ಸಿಂಗ್​ (ಅಜೇಯ 22 ರನ್​, 14 ಎಸೆತ, 4 ಬೌಂಡರಿ) ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

    ಟೀಮ್​ ಇಂಡಿಯಾ ಗೆಲುವಿಗೆ 6 ಎಸೆತದಲ್ಲಿ 7 ರನ್​ ಬೇಕಿದ್ದಾಗ ಸೀನ್​ ಅಬ್ಬಾಟ್​ ಎಸೆದ ಕೊನೆ ಓವರ್​ನಲ್ಲಿ ಅಕ್ಷರ್​ ಪಟೇಲ್ (2)​, ರವಿ ಬಿಷ್ಣೋಯ್​ (0) ಮತ್ತು ಅರ್ಷದೀಪ್​ ಸಿಂಗ್​ (0) ಬ್ಯಾಕ್​ ಟು ಬ್ಯಾಕ್​ ವಿಕೆಟ್​ ಒಪ್ಪಿಸಿದರು. ಕೊನೆಯಲ್ಲಿ ಒಂದು ಎಸೆತಕ್ಕೆ ಒಂದು ರನ್​ ಬೇಕಿದ್ದ ಸಂರ್ಭದಲ್ಲಿ ರಿಂಕು ಸಿಂಗ್​ ಸಿಕ್ಸರ್​ ಸಿಡಿಸಿದರು. ಆದರೆ, ಸಿಕ್ಸರ್​ ಅನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ. ಕೊನೆಯ ಎಸೆತ ನೋಬಾಲ್ ಎಂದು ಅಂಪೈರ್​ ತೀರ್ಪು ನೀಡಿದರು. ಗೆಲುವಿಗೆ ಒಂದು ರನ್​​ ಬೇಕಿದ್ದರಿಂದ ಸಿಕ್ಸರ್​ ಬದಲು ನೋಬಾಲ್​ ಅನ್ನು ಗಣನೆಗೆ ತೆಗೆದುಕೊಳ್ಳಲಾಯಿತು. ಇದರಿಂದ ರಿಂಕು, ಸಿಕ್ಸರ್ ವ್ಯರ್ಥವಾಯಿತು.​ ಅಂತಿಮವಾಗಿ ಭಾರತ 19.5 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 209 ರನ್​ ಗಳಿಸಿ ಗೆಲುವಿನ ನಗೆ ಬೀರಿತು. (ಏಜೆನ್ಸೀಸ್​)

    ಸೂರ್ಯಕುಮಾರ್​ ಸ್ಪೋಟಕ ಆಟಕ್ಕೆ ಬೆಚ್ಚಿದ ಕಾಂಗರೂಗಳು; ಆಸ್ಟ್ರೇಲಿಯಾ ವಿರುದ್ಧ ಮೊದಲ ಟಿ-20ಯಲ್ಲಿ ಭಾರತಕ್ಕೆ ಜಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts